ಭಾರತ–ಪಾಕ್ ನೌಕಾಪಡೆ ಹಡಗುಗಳ ನಡುವೆ ಢಿಕ್ಕಿ
ಪಾಕಿಸ್ತಾನದ ನಡವಳಿಕೆ ‘ಸ್ವೀಕಾರಾರ್ಹವಲ್ಲ’: ಭಾರತ ತೀವ್ರ ಆಕ್ಷೇಪ
ಸಾಂದರ್ಭಿಕ ಚಿತ್ರ (credit: ddnews.gov.in)
ಹೊಸದಿಲ್ಲಿ: ಅರೇಬಿಯನ್ ಸಮುದ್ರದ ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಹಡಗಿಗೆ ಪಾಕಿಸ್ತಾನದ ನೌಕಾಪಡೆಯ ಹಡಗು ಡಿಕ್ಕಿ ಹೊಡೆದ ಘಟನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನದ ನೌಕಾ ಘಟಕಗಳ ‘ಸ್ವೀಕಾರಾರ್ಹವಲ್ಲದ ಮತ್ತು ವೃತ್ತಿಪರವಲ್ಲದ ನಡವಳಿಕೆ’ ಖಂಡಿಸಿ, ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ಬುಧವಾರ ಕರೆಸಿ ಭಾರತ ತೀವ್ರ ಪ್ರತಿಭಟನೆ ದಾಖಲಿಸಿದೆ.
ಈ ಘಟನೆ ಮಂಗಳವಾರ ರಾತ್ರಿ ಅರೇಬಿಯನ್ ಸಮುದ್ರದಲ್ಲಿ ನಡೆದಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ. ಢಿಕ್ಕಿಯಿಂದ ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲವಾದರೂ, ಪಾಕಿಸ್ತಾನದ ನೌಕಾಪಡೆಯ ಹಡಗಿನ ನಡವಳಿಕೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ.
‘ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ನಡೆದ ಈ ಘಟನೆಯಿಂದ ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ. ಆದರೂ, ಪಾಕಿಸ್ತಾನದ ನೌಕಾಪಡೆಯ ಹಡಗಿನ ನಡವಳಿಕೆಯು 1991ರ ಎಪ್ರಿಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮಾಡಿಕೊಂಡಿರುವ ಮಿಲಿಟರಿ ವ್ಯಾಯಾಮಗಳು, ಕುಶಲತೆಗಳು ಹಾಗೂ ಪಡೆಗಳ ಚಲನವಲನಗಳ ಕುರಿತು ಮುಂಗಡ ಸೂಚನೆ ನೀಡುವ ಒಪ್ಪಂದದ 10ನೇ ವಿಧಿಯ ನೇರ ಉಲ್ಲಂಘನೆಯಾಗಿದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.