Keralam : ಬಿಜೆಪಿ ನಾಯಕನ ಮನೆಗೆ ನಟ ಮಮ್ಮುಟ್ಟಿ ಭೇಟಿ | ಸಾಮಾಜಿಕ ಮಾಧ್ಯಮದಲ್ಲಿ ಟೀಕೆ; ಖಂಡನೆ
ತ್ರಿಶೂರ್, ನ. 9: ಖ್ಯಾತ ನಟ ಮಮ್ಮುಟ್ಟಿ ಅವರು ತ್ರಿಶೂರ್ ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರ ಮನೆಗೆ ಭೇಟಿ ನೀಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಮಮ್ಮುಟ್ಟಿ ತಮ್ಮ ಮನೆಗೆ ಭೇಟಿ ನೀಡಿದ್ದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿರುವುದನ್ನು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ. ಗೋಪಾಲಕೃಷ್ಣನ್ ಅವರು ಸೋಮವಾರ ಖಂಡಿಸಿದ್ದಾರೆ. ಮತ್ತೊಂದೆಡೆ, ಸಿಪಿಐ (ಎಂ) ಈ ವಿವಾದದಿಂದ ದೂರ ಉಳಿಯಲು ಪ್ರಯತ್ನಿಸಿದೆ.
ಗೋಪಾಲಕೃಷ್ಣನ್ ಅವರ ಪುತ್ರಿಯ ವಿವಾಹವು ನವೆಂಬರ್ 1ರಂದು ಗುರುವಾಯೂರಿನಲ್ಲಿ ನಡೆದಿತ್ತು. ಈ ವಿವಾಹಕ್ಕೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಹಾಗೂ ಗಣ್ಯರು ಆಗಮಿಸಿದ್ದರು. ವಿವಾಹ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಟ ಮಮ್ಮುಟ್ಟಿ ರವಿವಾರ ಗೋಪಾಲಕೃಷ್ಣನ್ ಅವರ ಮನೆಗೆ ಭೇಟಿ ನೀಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಕೃಷ್ಣನ್, ಕೇರಳದಲ್ಲಿ ಜನರು ಸೌಹಾರ್ದತೆಯಿಂದ ಬದುಕುವುದನ್ನು ಕೆಲವು ಶಕ್ತಿಗಳು ಇಷ್ಟಪಡುತ್ತಿಲ್ಲ ಎಂದು ಆರೋಪಿಸಿದರು. ರಾಜಕೀಯ, ಧರ್ಮ, ಜಾತಿ, ಭಾಷೆ, ಉಡುಪು ಮತ್ತು ಬಣ್ಣವನ್ನು ಮೀರಿ ಸ್ನೇಹವಿರುತ್ತದೆ ಎಂದೂ ಹೇಳಿದರು.
‘‘ಕೇರಳದಲ್ಲಿ ಸ್ನೇಹ ಯಾವಾಗಲೂ ಇತ್ತು. ಆದರೆ, ಇತ್ತೀಚೆಗೆ ಕೆಲವು ಜನರು ಈ ಬಂಧವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಅವರು ತಿಳಿಸಿದರು.
ವಿವಾಹ ಸಮಾರಂಭಕ್ಕೆ ಸಿಪಿಐ (ಎಂ) ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಎಡಪಕ್ಷಗಳ ಹಲವು ಪದಾಧಿಕಾರಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಹಾಜರಿದ್ದರು ಎಂದು ಗೋಪಾಲಕೃಷ್ಣನ್ ಹೇಳಿದರು.