ಫೈಲ್ ಚಿತ್ರ (Photo: PTI) 

ಹೊಸದಿಲ್ಲಿ: ಗಾಂಧಿ ಜಯಂತಿಯಂದು ಮುಂಬೈನ ದಾದರ್‌ನಲ್ಲಿಯ ಶಿವಾಜಿ ಪಾರ್ಕ್‌ನಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸಹ-ಸಂಚಾಲಕರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ವಿರುದ್ಧ ಮುಂಬೈ ಪೊಲೀಸರು ಲುಕ್‌ಔಟ್ ಸುತ್ತೋಲೆಗಳನ್ನು (ಎಲ್‌ಒಸಿ) ಹೊರಡಿಸಿದ್ದಾರೆ.

ನವೆಂಬರ್ 23ರಂದು ದಿಲ್ಲಿ ವಿಮಾನ ನಿಲ್ದಾಣದಲ್ಲಿ ತಡೆಯಲ್ಪಟ್ಟಿದ್ದ ಸೌರವ್ ದಾಸ್ ಬ್ರಿಟನ್‌ಗೆ ತೆರಳಲು ಅನುಮತಿ ಕೋರಿ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಗುರುವಾರ ವಿಚಾರಣೆಯ ವೇಳೆ ಕೇಂದ್ರ ಗೃಹ ಸಚಿವಾಲಯವು ಲುಕ್‌ಔಟ್ ಸುತ್ತೋಲೆಯ ವಿಷಯವನ್ನು ಬಹಿರಂಗಪಡಿಸಿದೆ.

ಆರೋಪಿಗಳು ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆಯಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 2ರ ಪ್ರತಿಭಟನೆಗೆ ಸಂಬಂಧಿಸಿದಂತೆ ಅ.3ರಂದು ಎಫ್‌ಐಆರ್ ದಾಖಲಾಗಿತ್ತು. ಇದಾದ ಏಳು ವಾರಗಳ ನಂತರ, ಅಂದರೆ ನ.22-23ರ ರಾತ್ರಿ ದಾಸ್ ವಿರುದ್ಧ ಎಲ್‌ಒಸಿ ಹೊರಡಿಸಲಾಗಿತ್ತು.

ಭಾರತೀಯ ನ್ಯಾಯ ಸಂಹಿತೆ ಕಲಂ 189 ಮತ್ತು 223 ಹಾಗೂ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಕಲಂ 37 ಮತ್ತು 135ರ ಅಡಿ ಸಿಜೆಪಿ ನಾಯಕರಾದ ಅಭಿಜೀತ ದೀಪ್ಕೆ,‌ ಪ್ರಣವ್ ಅಹಿರೆ, ಅಶುತೋಷ ರಾಂಕಾ,ಅಜಿಂಕ್ಯ ಶಿಂದೆ, ಸೌರವ ದಾಸ್,ಅಫ್ರೀನ್ ನವಾಝ್,ಸೌಮ್ಯಾ ಕೋರ್ಡೆ,ಅಂಕಿತ ಭಾರದ್ವಾಜ್,ವಿಜಯ ಮಾಳಂಗಿ ಮತ್ತು ಯೋಗೇಶ ಇಂಗ್ಳೆ ಹಾಗೂ 400ಕ್ಕೂ ಹೆಚ್ಚು ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಪ್ರಕರಣವು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕಿಂತ ಭಿನ್ನವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ‘ಚಲೋ ಮುಂಬೈ’ ಹೆಸರಿನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಪೊಲೀಸರ ಅನುಮತಿ ನಿರಾಕರಣೆಯ ನಡುವೆಯೂ ನಟರಾದ ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ ಮತ್ತು ನಿರ್ದೇಶಕ ಆನಂದ್ ಪಟವರ್ಧನ್ ಸೇರಿದಂತೆ 4,000ಕ್ಕೂ ಹೆಚ್ಚು ಜನರು ಅಂದು ಸೇರಿದ್ದರು. ಪ್ರತಿಭಟನೆ ಶಾಂತಿಯುತವಾಗಿ ಮುಕ್ತಾಯಗೊಂಡಿತ್ತು.

ಗುರುವಾರ ನ್ಯಾಯಾಲಯದಲ್ಲಿ ದಾಸ್ ಪರ ವಕೀಲ ಅಖಿಲ್ ಸಿಬಲ್ ಅವರು ಎಲ್‌ಒಸಿ ವಿವರಗಳನ್ನು ಬಹಿರಂಗಪಡಿಸುವಂತೆ ಕೋರಿದರಾದರೂ ನ್ಯಾಯಾಲಯ ಅದನ್ನು ನಿರಾಕರಿಸಿತು. ಮತ್ತೊಂದೆಡೆ, ಜನ್ಮಸ್ಥಳದ ಬಗ್ಗೆ ಸ್ಪಷ್ಟನೆ ಕೋರಿ ಚೆನ್ನೈ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ನೀಡಿದ್ದ ಶೋಕಾಸ್ ನೋಟಿಸ್ ಕಾರಣದಿಂದ ದಾಸ್ ಅವರಿಗೆ ಪ್ರಯಾಣಿಸಲು ಅವಕಾಶ ನೀಡಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಮುಂದಿನ ವಿಚಾರಣೆಯು ಡಿಸೆಂಬರ್ 9ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಂದಕುಮಾರ್ , ವಾರ್ತಾಭಾರತಿ

contributor