ಮಹಾರಾಷ್ಟ್ರ | ಮೂವರು ಮಕ್ಕಳೊಂದಿಗೆ ಕಂದಕಕ್ಕೆ ಜಿಗಿದ ಮಹಿಳಾ ಕುಸ್ತಿಪಟು: ಮೂವರು ಮೃತ್ಯು; ಒಂದು ಮಗು ಪಾರು
Photo Credit : NDTV
ಮುಂಬೈ: ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಐತಿಹಾಸಿಕ ನಳದುರ್ಗ ಕೋಟೆಯಿಂದ ರಾಷ್ಟ್ರಮಟ್ಟದ ಮಹಿಳಾ ಕುಸ್ತಿಪಟು ತನ್ನ ಮೂವರು ಮಕ್ಕಳೊಂದಿಗೆ ಹಾರಿದ್ದು, ಅವರಲ್ಲಿ ಮಹಿಳಾ ಕುಸ್ತಿಪಟು ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಒಂದು ಮಗು ಪಾರಾಗಿದೆ.
ಅಶ್ವಿನಿ ಮನೋಹರ್ ಪೌಲ್ ಎಂದು ಗುರುತಿಸಲಾದ ಕುಸ್ತಿಪಟು ಮತ್ತು ಆಕೆಯ ಐದೂವರೆ ವರ್ಷದ ಮಗ ಅಜಿಂಕ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಕೆಯ ಎರಡೂವರೆ ವರ್ಷದ ಅವಳಿ ಹೆಣ್ಮು ಮಕ್ಕಳ ಪೈಕಿ ಕ್ರಾಂತಿ ಚಿಕಿತ್ಸೆ ಸಂದರ್ಭ ಮೃತಪಟ್ಟಿದ್ದಾಳೆ.
ಆಕೆಯ ಮತ್ತೊಬ್ಬ ಮಗಳು ವೀರಾ ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಧಾರಾಶಿವ್‌ನ ಸರಕಾರಿ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.
ಅಶ್ವಿನಿ ಪೌಲ್ ಕುಸ್ತಿ ವಲಯದಲ್ಲಿ ಪ್ರಸಿದ್ಧರಾಗಿದ್ದರು. ಅವರನ್ನು ‘ಮಹಾರಾಷ್ಟ್ರದ ಹೆಣ್ಣು ಹುಲಿ’ ಎಂದು ಕರೆಯಲಾಗುತ್ತಿತ್ತು. ತಮ್ಮ ಕ್ರೀಡಾ ಜೀವನದಲ್ಲಿ ಅವರು ರಾಷ್ಟ್ರಮಟ್ಟದಲ್ಲಿ ಐದು ಚಿನ್ನ ಮತ್ತು ಆರು ಬೆಳ್ಳಿ ಪದಕಗಳನ್ನು ಗೆದ್ದಿದ್ದರು.
ಅಶ್ವಿನಿ ಅವರ ಪತಿ ಮತ್ತು ಅತ್ತೆ-ಮಾವಂದಿರು ಆಕೆಗೆ ನಿರಂತರ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಅವರ ತಂದೆ ಆರೋಪಿಸಿದ್ದಾರೆ.
ಈ ಕುರಿತು ನಳದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.