ಅಮೆರಿಕ | ಜನ್ಮಸಿದ್ಧ ಪೌರತ್ವ ಪರಿಮಿತಿಗೊಳಿಸುವ ಟ್ರಂಪ್ ಅವರ ಹೊಸ ಆದೇಶಕ್ಕೆ ತಡೆ
ಡೊನಾಲ್ಡ್ ಟ್ರಂಪ್ | Photo Credit ; PTI
ವಾಶಿಂಗ್ಟನ್: ಜನ್ಮಸಿದ್ಧ ಪೌರತ್ವಕ್ಕೆ ಅರ್ಹರಾಗುವ ಜನರ ಸಂಖ್ಯೆಯನ್ನು ಪರಿಮಿತಿಗೊಳಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಹೊಸ ಕಾರ್ಯಾಂಗ ಆದೇಶವನ್ನು ಜಾರಿಗೆ ತರದಂತೆ ಫೆಡರಲ್ ನ್ಯಾಯಾಧೀಶರೊಬ್ಬರು ತಡೆ ನೀಡಿದ್ದಾರೆ.
ಜನ್ಮಸಿದ್ಧ ಪೌರತ್ವವನ್ನು ಕಡಿತಗೊಳಿಸುವ ಟ್ರಂಪ್ ಆಡಳಿತದ 2025ರ ಕಾರ್ಯಾಂಗ ಆದೇಶಕ್ಕೆ ಕಳೆದ ವರ್ಷ ತಡೆಯಾಜ್ಞೆ ನೀಡಿದ್ದ ಮೇರಿಲ್ಯಾಂಡ್‍ನ ಜಿಲ್ಲಾ ನ್ಯಾಯಾಧೀಶೆ ಡೆಬೊರಾ ಬೋರ್ಡ್‍ಮ್ಯಾನ್ ಅವರು, ವಲಸಿಗರ ಹಕ್ಕುಗಳ ಪ್ರತಿಪಾದಕರ ಕೋರಿಕೆಯ ಮೇರೆಗೆ ಈ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದ್ದಾರೆ.
ಅಮೆರಿಕನ್ ನಾಗರಿಕರು ಅಥವಾ ಕಾನೂನುಬದ್ಧ ಕಾಯಂ ನಿವಾಸಿಗಳಾಗದ (ಗ್ರೀನ್ ಕಾರ್ಡ್ ಹೊಂದಿರುವವರು) ಪೋಷಕರ ಮಕ್ಕಳಿಗೆ ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವ ಟ್ರಂಪ್ ಅವರ ಆರಂಭಿಕ ಪ್ರಯತ್ನವು ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯ ಪೌರತ್ವ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ಹೇಳಿ ಅಮೆರಿಕದ ಸುಪ್ರೀಂಕೋರ್ಟ್ ಜೂನ್ 30 ರಂದು ಅದನ್ನು ತಿರಸ್ಕರಿಸಿತ್ತು.