Maharashtra | ನೀಟ್ ಫಲಿತಾಂಶದಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

Update: 2026-07-27 07:50 IST

ಅಂಕಿತಾ ಸಾಂಗ್ಲೆ Photo: x.com/RRPSpeaks

ಮುಂಬೈ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿನಿಯೊಬ್ಬಳು ತೀವ್ರ ಮನನೊಂದು ಆತ್ಮಹತ್ಯೆಗೈದ ಘಟನೆ ಅಹಿಲ್ಯಾನಗರ ಜಿಲ್ಲೆಯ ಕರ್ಜತ್ ತಾಲೂಕಿನ ಜಲಾಲ್ಪುರ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಅಂಕಿತಾ ಸಾಂಗ್ಲೆ (19) ಎಂದು ಗುರುತಿಸಲಾಗಿದೆ.

ಆಕೆ ಆನ್‌ಲೈನ್ ಕೋಚಿಂಗ್ ಕ್ಲಾಸ್‌ಗಳ ಮೂಲಕ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಮನೆಯಲ್ಲಿ ಆಕೆ ಬರೆದಿಟ್ಟಿದ್ದಾಳೆನ್ನಲಾದ ಡೆತ್‌ನೋಟ್ ವಶಪಡಿಸಿಕೊಳ್ಳಲಾಗಿದೆ.

ಘಟನೆ ನಡೆದ ಸಮಯದಲ್ಲಿ ಅಂಕಿತಾ ಮನೆಯಲ್ಲಿ ಒಬ್ಬಳೇ ಇದ್ದಳು. ಆಕೆಯ ಪೋಷಕರು ಮತ್ತು ಅಣ್ಣ ಆಷಾಢಿ ಏಕಾದಶಿಗಾಗಿ ಪಂಢರಪುರಕ್ಕೆ ತೆರಳಿದ್ದರು. ಸಂಜೆ 5.30ರ ಸುಮಾರಿಗೆ ಹತ್ತಿರದಲ್ಲೇ ವಾಸಿಸುತ್ತಿದ್ದ ಸಂಬಂಧಿಕರು ಬಂದು ನೋಡಿದಾಗ ಆಕೆ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಘಟನೆ ಬೆಳಕಿಗೆ ಬಂದಿದೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕರ್ಜತ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹನುಮಾನ್ ಗಾಯಕ್ವಾಡ್, ನೀಟ್ ಮರುಪರೀಕ್ಷೆಯ ಫಲಿತಾಂಶದಿಂದ ಬೇಸತ್ತು ಈ ತೀವ್ರ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಮೃತಳು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ ಎಂದು ತಿಳಿಸಿದ್ದಾರೆ.

"ಪೋಷಕರು ಮತ್ತು ಅಣ್ಣನ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗದಿದ್ದಕ್ಕೆ ಕ್ಷಮೆ ಕೇಳಿರುವ ಆಕೆ, ತನ್ನನ್ನು ತಾನು ಒಬ್ಬ ಸಾಧಾರಣ ವಿದ್ಯಾರ್ಥಿನಿ ಎಂದು ಬರೆದುಕೊಂಡಿದ್ದಾಳೆ" ಎಂದು ಗಾಯಕ್ವಾಡ್ ಹೇಳಿದ್ದಾರೆ.

ಆದರೆ ಈ ಘಟನೆಯ ಕುರಿತು ಕರ್ಜತ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಘಟನೆಗೆ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್, "ದಿಲ್ಲಿಯಲ್ಲಿ ವಿದ್ಯಾರ್ಥಿ ಚಳವಳಿ ಯಶಸ್ಸು ಕಾಣುತ್ತಿರುವಾಗಲೇ ದುಃಖಕರ ಘಟನೆಯೊಂದು ನಡೆದಿದೆ. ನೀಟ್ ಗೊಂದಲಗಳ ನಡುವೆ ಆತ್ಮವಿಶ್ವಾಸ ಕಳೆದುಕೊಂಡ ಕರ್ಜತ್‌ನ ಜಲಾಲ್ಪುರದ ವಿದ್ಯಾರ್ಥಿನಿ ಅಂಕಿತಾ ತನ್ನ ಜೀವನ ಕೊನೆಗೊಳಿಸಿಕೊಂಡಿದ್ದಾಳೆ. ಆಕೆಯ ಕುಟುಂಬದ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಅಂಕಿತಾಗೆ ಭಾವಪೂರ್ಣ ಶ್ರದ್ಧಾಂಜಲಿ" ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಈ ಭಾಗದಲ್ಲಿ ಕೆಲವೇ ವಾರಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ. ಜೂನ್ 20 ರಂದು ನಾಸಿಕ್‌ನ ನಿಫಾಡ್ ತಾಲೂಕಿನ ಕರಂಜಿ ಗ್ರಾಮದ 21 ವರ್ಷದ ಯಶ್ ಗೋಸಾವಿ ಎಂಬ ಯುವಕ ನೀಟ್ ಮರುಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಅಣ್ಣ ಅನಿಕೇತ್, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಲ್ಲೊಬ್ಬರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News