‘ಅಣಕು ಸಂಸತ್ತಿನಲ್ಲಿ ರಾಹುಲ್ ಗಾಂಧಿಯನ್ನೇ ʼ ಅಣಕುʼ ಪ್ರಧಾನಿಯನ್ನಾಗಿ ಮಾಡಿ’: ಬಿಜೆಪಿ ವ್ಯಂಗ್ಯ
CEC ವಿರುದ್ಧ ಮಹಾವಿಯೋಗ ಪ್ರಕ್ರಿಯೆಗೆ ಸಂಬಿತ್ ಪಾತ್ರಾ ತಿರುಗೇಟು; ಪ್ರತಿಪಕ್ಷಗಳ ಗುರಿ ಆಡಳಿತ ಬದಲಾವಣೆ ಎಂದು ಆರೋಪ
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ಅಣಕು ಮಹಾವಿಯೋಗ ಪ್ರಕ್ರಿಯೆಯು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ವ್ಯಂಗ್ಯವಾಡಿದೆ. ‘ಅಣಕು ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರನ್ನೇ ಅಣಕು ಪ್ರಧಾನಿಯನ್ನಾಗಿ ಮಾಡಿ’ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರಾ ಲೇವಡಿ ಮಾಡಿದ್ದಾರೆ.
ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗದ ಪ್ರತಿಪಕ್ಷಗಳು ಪ್ರತಿಭಟನೆಗಳ ಮೂಲಕ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದರು.
ಪ್ರತಿಪಕ್ಷಗಳ ಈ ಅಣಕು ಅಧಿವೇಶನವನ್ನು ಲೇವಡಿ ಮಾಡಿದ ಸಂಬಿತ್ ಪಾತ್ರಾ, ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ವ್ಯಂಗ್ಯವಾಡಿದರು. ‘ನನ್ನದೊಂದು ವಿನಮ್ರ ಮನವಿ. ದಯವಿಟ್ಟು ಸಂಸತ್ತನ್ನೇ ಮುರಿದುಹಾಕಬೇಡಿ. ನೀವು ರಚಿಸಿರುವ ಅಣಕು ಸಂಸತ್ತಿನಲ್ಲಿ ಆಡಳಿತ ಪಕ್ಷದ ಕಡೆಯಿಂದ ರಾಹುಲ್ ಗಾಂಧಿಯವರಿಗೆ ಕುರ್ತಾ-ಪೈಜಾಮ ಧರಿಸುವಂತೆ ಮಾಡಿ. ಟಿ-ಶರ್ಟ್ ಬೇಡ. ಅಲ್ಲಿ ಪ್ರತಿದಿನ ಅವರನ್ನು “ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ” ಎಂದು ಕರೆಯುತ್ತಾ ಭಜನೆ-ಕೀರ್ತನೆ ನಡೆಸಿ’ ಎಂದು ಹೇಳಿದರು.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ ಅವರು, ಪ್ರತಿಪಕ್ಷಗಳ ಹೋರಾಟದ ಉದ್ದೇಶ SIR ಪ್ರಕ್ರಿಯೆಯಲ್ಲಿನ ಲೋಪಗಳನ್ನು ಸರಿಪಡಿಸುವುದಾಗಲಿ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸುವುದಾಗಲಿ ಅಲ್ಲ; ಬದಲಿಗೆ ಸರ್ಕಾರವನ್ನೇ ಬದಲಾಯಿಸುವುದಾಗಿದೆ ಎಂದು ಆರೋಪಿಸಿದರು.
‘ರಾಹುಲ್ ಗಾಂಧಿ ಆಗಲಿ ಅಥವಾ ಅವರ ಸಹಚರರಾಗಲಿ, ಎಲ್ಲರ ಉದ್ದೇಶ ಆಡಳಿತ ಬದಲಾವಣೆ (ರೆಜಿಮ್ ಚೇಂಜ್) ಮಾಡುವುದೇ ಆಗಿದೆ. ಅವರ ಹೋರಾಟ SIR ವಿರುದ್ಧವಾಗಲಿ ಅಥವಾ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿಯಾಗಲಿ ಇಲ್ಲ. ಜನರು ಪದೇ ಪದೇ ಸೋಲಿಸಿದ್ದರೂ, ಚುನಾವಣೆ ಎದುರಿಸದೆ ಹೇಗಾದರೂ ಅಧಿಕಾರವನ್ನು ವಶಪಡಿಸಿಕೊಂಡು ತಮ್ಮದೇ ಸರ್ಕಾರ ಸ್ಥಾಪಿಸುವುದೇ ಅವರ ಏಕೈಕ ಗುರಿ’ ಎಂದು ಅವರು ಹೇಳಿದ್ದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
►ನೇಹಾ ಬೋರಾ ವಿರುದ್ಧವೂ ವಾಗ್ದಾಳಿ
ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆ AISA ಮುಖ್ಯಸ್ಥೆ ನೇಹಾ ಬೋರಾ ಕೂಡ ಭಾಗವಹಿಸಿದ್ದರು. ಕಾಕ್ರೋಚ್ ಜನತಾ ಪಕ್ಷದ ಆಂದೋಲನದ ಮುಂಚೂಣಿಯಲ್ಲಿದ್ದ ಅವರು ಕಾಂಗ್ರೆಸ್ ನ ಪ್ರತಿಭಟನಾ ಮೆರವಣಿಗೆಗೆ ಬೆಂಬಲ ನೀಡಿದ್ದರು.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ಪ್ರತಿಪಕ್ಷ ನಾಯಕರೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದ ನೇಹಾ ಬೋರಾ ಅವರ ಚಿತ್ರಗಳು ರಾಷ್ಟ್ರೀಯ ಸುದ್ದಿಗಳಲ್ಲಿ ಗಮನ ಸೆಳೆದಿದ್ದವು.
ಈ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಸಂಬಿತ್ ಪಾತ್ರಾ, ನೇಹಾ ಬೋರಾ ಅವರನ್ನೂ ಟೀಕಿಸಿದರು. 2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ವಿದ್ಯಾರ್ಥಿ ಪ್ರತಿಭಟನೆಗಳಿಂದಾಗಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಘಟನೆಯನ್ನು ಉಲ್ಲೇಖಿಸಿದರು.
‘ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಕಂಡುಬಂದಂತಹ ಪರಿಸ್ಥಿತಿಯನ್ನು ಭಾರತದಲ್ಲಿಯೂ ಸೃಷ್ಟಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ’ ಎಂದು ಆರೋಪಿಸಿದರು.
ಸರ್ಜಿಕಲ್ ಸ್ಟ್ರೈಕ್ ಗಳ ಸಂದರ್ಭ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪ್ರತಿಪಕ್ಷಗಳ ನಾಯಕರು ಪೊಲೀಸ್ ಮತ್ತು ಸಶಸ್ತ್ರ ಪಡೆಗಳನ್ನು ಟೀಕಿಸಿದ್ದಾರೆ ಎಂದೂ ಪಾತ್ರಾ ದೂರಿದರು.
‘ಭಾರತದಲ್ಲಿ ಪಾಕಿಸ್ತಾನದಂತಹ ಪರಿಸ್ಥಿತಿ ಬೇಕೇ? ಪಾಕಿಸ್ತಾನದಲ್ಲಿರುವಂತೆ ಭಾರತದ ಪೊಲೀಸರು ಮತ್ತು ಸೇನೆ ಸರ್ಕಾರದ ವಿರುದ್ಧ ದಂಗೆ ಏಳುತ್ತವೆ ಎಂದು ನೀವು ಭಾವಿಸಿದ್ದರೆ, ಅದು ನಿಮ್ಮ ಭ್ರಮೆ ಅಷ್ಟೇ. ಭಾರತವು ಅಸ್ಥಿರ ಅಥವಾ ದುರ್ಬಲ ಆಡಳಿತ ವ್ಯವಸ್ಥೆ ಹೊಂದಿರುವ ದೇಶವಲ್ಲ (ಬನಾನಾ ರಿಪಬ್ಲಿಕ್). ಈ ವಿಷಯವನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಇಂತಹ ಹೇಳಿಕೆಗಳನ್ನು ನೀಡಲು ನಿಮಗೆ ಎಷ್ಟು ಧೈರ್ಯ?’ ಎಂದು ಪ್ರಶ್ನಿಸಿದರು.
►ಜಂತರ್ ಮಂತರ್ ನಲ್ಲೇ ಹೋರಾಟ ಅಂತ್ಯ
ಪ್ರತಿಭಟನೆಯ ಕುರಿತು ಮಾತನಾಡಿದ ಸಂಬಿತ್ ಪಾತ್ರಾ, ಜಂತರ್ ಮಂತರ್ ನಲ್ಲಿ ಆರಂಭವಾಗಿರುವ ಈ ಚಳವಳಿ ಅದೇ ಸ್ಥಳದಲ್ಲಿಯೇ ಅಂತ್ಯಗೊಳ್ಳಲಿದೆ ಎಂದು ಹೇಳಿದರು.
‘ಭಾರತವು ಜಂತರ್ ಮಂತರ್ ನ ಎರಡು ಕಿಲೋಮೀಟರ್ ವ್ಯಾಪ್ತಿಗೆ ಮಾತ್ರ ಸೀಮಿತವಾಗಿಲ್ಲ. ಇದು ವಿಶಾಲವಾದ ದೇಶ’ ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಪ್ರತಿಭಟನೆಯನ್ನು ಟೀಕಿಸಿದರು.