CEC ವಿರುದ್ಧ ಮಹಾವಿಯೋಗಕ್ಕೆ 'ಇಂಡಿಯಾ' ಮೈತ್ರಿಕೂಟದಿಂದ ಅಣಕು ಸಂಸತ್; ಜ್ಞಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಖರ್ಗೆ ಆಗ್ರಹ
ಸಂಸತ್ತಿನ ಕಲಾಪದ ಮಾದರಿಯಲ್ಲಿ ನಡೆದ ಅಧಿವೇಶನ
Photo Credit : x@INCIndia
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' (INDIA) ಮೈತ್ರಿಕೂಟವು ಶನಿವಾರ ಅಣಕು ಸಂಸತ್ ಅಧಿವೇಶನ ನಡೆಸಿ, ಸಾರ್ವಜನಿಕ ಮಹಾವಿಯೋಗ (Public Impeachment) ಪ್ರಕ್ರಿಯೆ ನಡೆಸಿತು. ಇತ್ತೀಚಿನ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿವೆ ಮತ್ತು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದ ಮೈತ್ರಿಕೂಟ, ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಹುದ್ದೆಯಿಂದ ತೆಗೆದುಹಾಕಬೇಕು ಹಾಗೂ ಅವರ ವಿರುದ್ಧ ದೇಶದ್ರೋಹದ ಆರೋಪದಡಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿತು.
ಸಂಸತ್ತಿನ ಕಲಾಪದ ಮಾದರಿಯಲ್ಲಿ ನಡೆದ ಈ ಅಧಿವೇಶನದ ಅಧ್ಯಕ್ಷತೆಯನ್ನು ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ವಹಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜ್ಞಾನೇಶ್ ಕುಮಾರ್ ವಿರುದ್ಧ ಮಹಾವಿಯೋಗ ನಿರ್ಣಯ ಮಂಡಿಸಿದರು. ಬಿಜೆಪಿ ನೇತೃತ್ವದ NDA ಸರ್ಕಾರವು ಅಕ್ರಮವಾಗಿ ಅಧಿಕಾರದಲ್ಲಿ ಮುಂದುವರಿದಿದೆ ಎಂಬ ಆರೋಪವನ್ನೂ ಮೈತ್ರಿಕೂಟ ಪುನರುಚ್ಚರಿಸಿತು.
ಅಣಕು ಅಧಿವೇಶನಕ್ಕಾಗಿ ಹುಲ್ಲುಹಾಸಿನ ಮೇಲೆ ಆಸನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ವೇದಿಕೆಯ ಮೇಲೆ ಮೀರಾ ಕುಮಾರ್ ಅವರಿಗೆ ಆಸನ ಕಲ್ಪಿಸಲಾಗಿತ್ತು. ಅದರ ಹಿನ್ನೆಲೆಯನ್ನು ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್ ಮಾದರಿಯಲ್ಲಿ ಸಿದ್ಧಪಡಿಸಲಾಗಿತ್ತು. ಹಿಂದೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಜಂಟಿಯಾಗಿ ಸಭೆ ಸೇರುತ್ತಿದ್ದ ಸ್ಥಳದ ಮಾದರಿಯನ್ನು ಮರುಸೃಷ್ಟಿಸಲಾಗಿತ್ತು.
ಮಹಾವಿಯೋಗ ನಿರ್ಣಯವನ್ನು ಮಂಡಿಸಿದ ಬಳಿಕ ಮಾತನಾಡಿದ ಖರ್ಗೆ, 2023ರ ಕಾನೂನಿನಡಿ ದೊರೆತಿರುವ ಕಾನೂನು ರಕ್ಷಣೆ ತಮ್ಮನ್ನು ಕಾಪಾಡುತ್ತದೆ ಎಂದು ಜ್ಞಾನೇಶ್ ಕುಮಾರ್ ಭಾವಿಸಿದ್ದರೆ, ದೇಶದ ಜನರ ಮನಸ್ಥಿತಿಯನ್ನು ಗಮನಿಸಬೇಕು ಎಂದು ಎಚ್ಚರಿಸಿದರು. "ನಿಮ್ಮ ವಿರುದ್ಧದ ಆರೋಪಗಳಿಂದ ನೀವು ಪಾರಾಗಲು ಸಾಧ್ಯವಿಲ್ಲ. ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವವರೆಗೂ ವಿರೋಧ ಪಕ್ಷಗಳು ಮತ್ತು ದೇಶದ ಜನರು ಹೋರಾಟ ಮುಂದುವರಿಸಲಿದ್ದಾರೆ" ಎಂದು ಖರ್ಗೆ ಎಚ್ಚರಿಸಿದರು.
► ರಾಹುಲ್ ಗಾಂಧಿ ಟೀಕಿಸಿದ ಬಿಜೆಪಿ
ಇಂಡಿಯಾ ಮೈತ್ರಿಕೂಟದ ಅಣಕು ಸಂಸತ್ ಅಧಿವೇಶನಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ ಬಿಜೆಪಿ, "ವಾಸ್ತವದಲ್ಲಿ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಾಗದ ಅವರು, ಈಗ ತಮಗೆ ಇಷ್ಟವಾದ ಸಂಸತ್ತಿನಲ್ಲಿ ಕುಳಿತಿದ್ದಾರೆ" ಎಂದು ವ್ಯಂಗ್ಯವಾಡಿದೆ.
ಬಿಜೆಪಿ ವಕ್ತಾರ ಗುರು ಪ್ರಕಾಶ್ ಪಾಸ್ವಾನ್ ಅವರು ಈ ಕಾರ್ಯಕ್ರಮವು ಗೊಂದಲ ಸೃಷ್ಟಿಸುವ ಮತ್ತು ಜನರನ್ನು ದಾರಿತಪ್ಪಿಸುವ ನಿರೂಪಣೆಗಳನ್ನು ಹರಡುವ ಪ್ರಯತ್ನ ಎಂದು ಟೀಕಿಸಿದ್ದಾರೆ. "ಇದೊಂದು ಅಣಕು ಸಂಸತ್ತಲ್ಲ, ಬದಲಾಗಿ ಅಪಹಾಸ್ಯ" ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷಗಳು, 'ಕಾಕ್ರೋಚ್ ಜನತಾ ಪಾರ್ಟಿ' ಸೇರಿದಂತೆ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳ ಸರಣಿಯ ಭಾಗವಾಗಿ ಈ ಅಧಿವೇಶನ ಆಯೋಜಿಸಲಾಗಿತ್ತು. ನ. 1ರಂದು ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಬೃಹತ್ ರ್ಯಾ ಲಿಗೆ ಒಂದು ದಿನ ಮುನ್ನ ಈ ಕಾರ್ಯಕ್ರಮ ನಡೆದಿದೆ.
ನ. 1ರಂದು ನಡೆಯಲಿರುವ ರ್ಯಾಲಿಗೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ. ಆದರೆ, ಆಮ್ ಆದ್ಮಿ ಪಕ್ಷ (AAP) ಸೇರಿದಂತೆ ಕೆಲವು ಪಕ್ಷಗಳು ತಾವು ಇಂಡಿಯಾ ಮೈತ್ರಿಕೂಟದ ಭಾಗವಲ್ಲ ಎಂದು ಸ್ಪಷ್ಟಪಡಿಸಿವೆ. ಈ ಅಣಕು ಅಧಿವೇಶನವನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನ ಇತರ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ X ನಲ್ಲಿ ನೇರಪ್ರಸಾರ ಮಾಡಲಾಯಿತು.
►ಮತದಾರರ ಹೆಸರು ಅಳಿಸುವ ಬಗ್ಗೆ ಮೀರಾ ಕುಮಾರ್ ಕಳವಳ
ಅಣಕು ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಮೀರಾ ಕುಮಾರ್, ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿದರು.
"ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂಬುದನ್ನು ನೀವು ಗಮನಿಸಿರಬಹುದು. ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ ಯಾವುದೇ ಪಾರದರ್ಶಕತೆಯಿಲ್ಲದ ಉತ್ತರಗಳು ದೊರೆಯುತ್ತಿವೆ. ಇದೇ ಕಾರಣಕ್ಕೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ದೋಷಾರೋಪಣಾ ನಿರ್ಣಯ ಮಂಡಿಸಲಾಗಿದೆ" ಎಂದು ಹೇಳಿದರು.
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಈ ಬೆಳವಣಿಗೆ ಕಳವಳಕಾರಿ ಎಂದ ಅವರು, "ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ರಾಷ್ಟ್ರಗಳು ನಮ್ಮತ್ತ ನೋಡುತ್ತವೆ. ನಮ್ಮ ಪ್ರಜಾಪ್ರಭುತ್ವದ ಮಾದರಿಯನ್ನು ಅನುಸರಿಸುತ್ತವೆ" ಎಂದು ಹೇಳಿದರು.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗಿರುವ ನಾಗರಿಕರಿಗೆ ಈ ಅಧಿವೇಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಇಂಡಿಯಾ ಮೈತ್ರಿಕೂಟದ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ನಾಗರಿಕರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.
►ಆರು ಆರೋಪಗಳ ಪಟ್ಟಿ
ಅಣಕು ಅಧಿವೇಶನದಲ್ಲಿ ಮಹಾವಿಯೋಗ ನಿರ್ಣಯ ಮಂಡಿಸಿದ ಖರ್ಗೆ, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ಮೂಲಭೂತವಾದದ್ದು. ಆದರೆ, ಇಂದು ಈ ಹಕ್ಕು ಗಂಭೀರ ಅಪಾಯದಲ್ಲಿದೆ. ಇದು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಹೋರಾಟವಾಗಿದೆ ಎಂದು ಹೇಳಿದರು.
ಮುಖ್ಯ ಚುನಾವಣಾ ಆಯುಕ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
"ಅಧಿಕಾರದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳಲು ಆಡಳಿತಾರೂಢ ವ್ಯವಸ್ಥೆಯು ಸಾಧ್ಯವಿರುವ ಎಲ್ಲ ರೀತಿಯ ಪಿತೂರಿಗಳನ್ನು ನಡೆಸಿದೆ. ಸಂಸದರನ್ನು ಸೆಳೆದುಕೊಳ್ಳುವುದು, ರಾಜಕೀಯ ಪಕ್ಷಗಳನ್ನು ಒಡೆಯುವುದು, ಸರ್ಕಾರಗಳನ್ನು ಉರುಳಿಸುವುದು ಅಥವಾ ಕಸಿದುಕೊಳ್ಳುವುದು, ಚುನಾವಣಾ ಬಾಂಡ್ ಯೋಜನೆ ಹಾಗೂ ಜಾರಿ ನಿರ್ದೇಶನಾಲಯ (ED), ಕೇಂದ್ರ ತನಿಖಾ ದಳದ (CBI)ಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಇವೆಲ್ಲವೂ ಇದರಲ್ಲಿ ಸೇರಿವೆ. ಈಗ ಮತ ಕಳ್ಳತನ ನಡೆಯುತ್ತಿದೆ" ಎಂದು ದೂರಿದರು.
ಈ ಪ್ರಸ್ತಾವನೆಗೆ ಸಂಬಂಧಿಸಿದ ಅಧಿಕೃತ ಹೇಳಿಕೆಯಲ್ಲಿ, ಭಾರತದ ಜನಸಂಖ್ಯೆಯ ಶೇ.60ಕ್ಕೂ ಹೆಚ್ಚು ಜನರನ್ನು ಪ್ರತಿನಿಧಿಸುವ ಇಂಡಿಯಾ ಮೈತ್ರಿಕೂಟದ ಸದಸ್ಯರು ಮತ್ತು ನಾಗರಿಕರು ಅಕ್ಟೋಬರ್ 31, 2026ರಂದು ನವದೆಹಲಿಯಲ್ಲಿ ಒಗ್ಗೂಡಿದ್ದಾರೆ ಎಂದು ತಿಳಿಸಲಾಗಿದೆ.
ಭಾರತದ ಸಂವಿಧಾನದ 326ನೇ ವಿಧಿಯಲ್ಲಿ ಪ್ರತಿಪಾದಿಸಿರುವ ಸಾರ್ವತ್ರಿಕ ಮತದಾನದ ಹಕ್ಕು ನಮ್ಮ ಪ್ರಮುಖ ಬದ್ಧತೆಯಾಗಿದೆ. ಆದರೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕ್ರಮಗಳಿಂದ ಈ ಹಕ್ಕು ತೀವ್ರ ಅಪಾಯದಲ್ಲಿದೆ. ಹೀಗಾಗಿ ಅವರನ್ನು ಪದಚ್ಯುತಗೊಳಿಸಬೇಕು ಎಂದು ನಿರ್ಣಯಿಸಿರುವುದಾಗಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಜ್ಞಾನೇಶ್ ಕುಮಾರ್ ವಿರುದ್ಧ ಆರು ಪ್ರಮುಖ ಆರೋಪಗಳನ್ನು ಪಟ್ಟಿ ಮಾಡಲಾಗಿದೆ.
• ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲು ಸಂಚು ರೂಪಿಸಿರುವುದು.
• 13.2 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದು.
• ಸಂಸತ್ತಿನ ಅನುಮೋದನೆಯಿಲ್ಲದೆ ಮತದಾರರ ನೋಂದಣಿಗೆ ಸಂಬಂಧಿಸಿದ 'ಫಾರ್ಮ್ 6' ಅನ್ನು ಬದಲಾಯಿಸಿರುವುದು.
• ಇಸಿನೆಟ್ (ECINET) ಆನ್ಲೈನ್ ವ್ಯವಸ್ಥೆಯ ಮೂಲಕ ಮತದಾರರ ಪಟ್ಟಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದು.
• ಇತರ ಇಬ್ಬರು ಚುನಾವಣಾ ಆಯುಕ್ತರನ್ನು ನಿರ್ಲಕ್ಷಿಸಿ, ಪ್ರಕ್ರಿಯೆಯಿಂದ ಹೊರಗಿಟ್ಟಿರುವುದು.
• ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಿರ್ದೇಶನದಂತೆ ಕಾರ್ಯನಿರ್ವಹಿಸಿರುವುದು.
ಈ ಅಧಿವೇಶನದಲ್ಲಿ ವಿವಿಧ ಪಕ್ಷಗಳ ನಾಯಕರು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರು ಹಾಗೂ ವಿದ್ಯಾರ್ಥಿ ಕಾರ್ಯಕರ್ತೆ ನೇಹಾ ಬೋರಾ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
►ಹಿಂದಿನ ಮಹಾವಿಯೋಗ ನೋಟಿಸ್ ಗಳು ತಿರಸ್ಕೃತ
ಕಾಂಗ್ರೆಸ್ ಆರಂಭದಲ್ಲಿ ಈ ಕಾರ್ಯಕ್ರಮವನ್ನು 'ಅಣಕು ಸಂಸತ್ತು' ಎಂದು ಆಯೋಜಿಸಲು ಯೋಜಿಸಿತ್ತು. ಬಳಿಕ ಅದಕ್ಕೆ 'ಸಾರ್ವಜನಿಕ ಮಹಾವಿಯೋಗ' ಎಂದು ಮರುನಾಮಕರಣ ಮಾಡಿತು.
ವಾಸ್ತವವಾಗಿ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸುವ ಉದ್ದೇಶದಿಂದ ಇಂಡಿಯಾ ಮೈತ್ರಿಕೂಟ ಸಲ್ಲಿಸಿದ್ದ ನೋಟಿಸ್ ಗಳನ್ನು ತಿರಸ್ಕರಿಸಲಾಗಿತ್ತು. ದಿಲ್ಲಿಯಲ್ಲಿ ಮಳೆಯಾದ ಕಾರಣ ಶುಕ್ರವಾರ ನಡೆಯಬೇಕಿದ್ದ ಈ ಅಣಕು ಕಾರ್ಯಕ್ರಮವನ್ನು ಒಂದು ದಿನ ಮುಂದೂಡಲಾಗಿತ್ತು.