ಮೀಸಲಾತಿ ವಿವಾದ: ಮಾಂಝಿ ರಾಜೀನಾಮೆಗೆ ಚಿರಾಗ್ ಪಾಸ್ವಾನ್ ಆಗ್ರಹ
ಜಿತಿನ್ ರಾಮ್ ಮಾಂಝಿ | ಚಿರಾಗ್ ಪಾಸ್ವಾನ್ ( Photo Credit: PTI)
ಹೊಸದಿಲ್ಲಿ: ಮೀಸಲಾತಿ ನೀತಿಯನ್ನು ಪರಿಷ್ಕರಿಸಬೇಕು ಎಂಬ ಹಿಂದೂಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) ಪಕ್ಷದ ಹೇಳಿಕೆಯ ಬೆನ್ನಲ್ಲೇ ಎನ್‌ಡಿಎ ಮೈತ್ರಿಕೂಟದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ವಿಚಾರದಲ್ಲಿ ಕೇಂದ್ರ ಸಚಿವ ಜಿತಿನ್ ರಾಮ್ ಮಾಂಝಿ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಶನಿವಾರ ಆಗ್ರಹಿಸಿದ್ದಾರೆ.
ದಿಲ್ಲಿಯ ಜಂತರ್ ಮಂತರ್‌ನಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆ ನಡೆದ ಬೆನ್ನಲ್ಲೇ ಮೀಸಲಾತಿ ವಿಚಾರ ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿತ್ತು. ಇದೇ ಸಂದರ್ಭದಲ್ಲಿ ಎನ್‌ಡಿಎಯ ಮಿತ್ರಪಕ್ಷಗಳಾದ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಮತ್ತು ಹಿಂದೂಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿದೆ.
ಪ್ರಸ್ತುತ ಮೀಸಲಾತಿ ವ್ಯವಸ್ಥೆಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ)ಗಳಲ್ಲಿನ ವಿವಿಧ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಬೇಕು ಎಂದು ಜಿತಿನ್ ರಾಮ್ ಮಾಂಝಿ ಬೆಂಬಲಿತ ಹಿಂದೂಸ್ತಾನಿ ಅವಾಮಿ ಮೋರ್ಚಾ ಆಗ್ರಹಿಸಿತ್ತು. ಹೀಗಾಗಿ, ಬಿಹಾರದ ಇಬ್ಬರು ಕೇಂದ್ರ ಸಚಿವರಾದ ಜಿತಿನ್ ರಾಮ್ ಮಾಂಝಿ ಮತ್ತು ಚಿರಾಗ್ ಪಾಸ್ವಾನ್ ನಡುವೆ ವಾಕ್ಸಮರ ತೀವ್ರಗೊಂಡಿದೆ.
ಇದಕ್ಕೂ ಮುನ್ನ ಜಿತಿನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್, ‘ದುರ್ಬಲ ವರ್ಗಗಳು ಹಾಗೂ ಐತಿಹಾಸಿಕವಾಗಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ಮೀಸಲಾತಿಯ ಪ್ರಯೋಜನ ತಲುಪುವುದನ್ನು ಖಾತರಿಪಡಿಸಲು ಮೀಸಲಾತಿ ನೀತಿಯ ಪರಿಷ್ಕರಣೆ ಅಗತ್ಯ’ ಎಂದು ಹೇಳಿದ್ದರು.
‘ನಾವು ಮೀಸಲಾತಿಯನ್ನು ಅಂತ್ಯಗೊಳಿಸುವ ಕುರಿತು ಮಾತನಾಡುತ್ತಿಲ್ಲ. ಮೀಸಲಾತಿಯನ್ನು ಹೆಚ್ಚು ನ್ಯಾಯಯುತ, ಪರಿಣಾಮಕಾರಿ ಹಾಗೂ ದಮನಿತ ಸಮುದಾಯಗಳನ್ನು ನೈಜವಾಗಿ ತಲುಪುವಂತೆ ಮಾಡುವ ಕುರಿತು ಮಾತನಾಡುತ್ತಿದ್ದೇವೆ’ ಎಂದು ಅವರು ಹೇಳಿದ್ದರು.
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಮತ್ತು ಹಿಂದೂಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) ಎರಡೂ ಬಿಹಾರ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಎನ್‌ಡಿಎಯ ಮಿತ್ರಪಕ್ಷಗಳಾಗಿವೆ. ಜಿತಿನ್ ರಾಮ್ ಮಾಂಝಿ ದಲಿತ ಸಮುದಾಯದಲ್ಲೇ ಅತ್ಯಂತ ಹಿಂದುಳಿದ ಮುಶಾಹರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ದಲಿತರ ಮೀಸಲಾತಿಯ ಪ್ರಯೋಜನ ಪಾಸ್ವಾನ್ ಮತ್ತು ರವಿದಾಸ್ ಸಮುದಾಯಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರೀಕೃತವಾಗಿದೆ ಎಂದು ಹಿಂದೂಸ್ತಾನಿ ಅವಾಮಿ ಮೋರ್ಚಾ ಆರೋಪಿಸಿತ್ತು. ದಲಿತರ ಮೀಸಲಾತಿಯ ಲಾಭ ಹಲವು ಸಮುದಾಯಗಳನ್ನು ತಲುಪಿಲ್ಲ ಎಂದೂ ಅದು ದೂರಿತ್ತು. ಮುಶಾಹರ್ ಸಮುದಾಯದಿಂದ ಈವರೆಗೆ ಒಬ್ಬರೂ ಐಎಎಸ್ ಅಧಿಕಾರಿಯಾಗಿಲ್ಲ ಎಂದು ಸಂತೋಷ್ ಕುಮಾರ್ ಸುಮನ್ ಗಮನ ಸೆಳೆದಿದ್ದರು.
2024ರಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿನ ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಾತಿಯ ಪ್ರಯೋಜನ ದೊರೆಯುವುದನ್ನು ಖಾತರಿಪಡಿಸಲು ಈ ವರ್ಗಗಳಲ್ಲೇ ಒಳಮೀಸಲಾತಿ ಕಲ್ಪಿಸಬಹುದು ಎಂದು ತೀರ್ಪು ನೀಡಿತ್ತು.
ಈ ತೀರ್ಪಿನ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿನ ಒಳಮೀಸಲಾತಿ ಹಾಗೂ ಮೀಸಲಾತಿ ನೀತಿಯ ಪರಿಷ್ಕರಣೆ ಕುರಿತು ಚರ್ಚೆ ತೀವ್ರಗೊಂಡಿದ್ದು, ಇದೀಗ ಈ ವಿಚಾರ ಎನ್‌ಡಿಎ ಮೈತ್ರಿಕೂಟದೊಳಗಿನ ಭಿನ್ನಮತಕ್ಕೂ ಕಾರಣವಾಗಿದೆ.