ಮದುರೈ: ಜಿಲ್ಲೆಯ ಉಸಿಲಂಪಟ್ಟಿಯ ಸರಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ದಾಖಲಾತಿಗಾಗಿ ಬಂದಿದ್ದ ದಲಿತ ಬಾಲಕಿಗೆ ಮುಖ್ಯೋಪಾಧ್ಯಾಯಿನಿ ಅವಮಾನ ಮಾಡಿದ್ದರಿಂದ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಮುಖ್ಯೋಪಾಧ್ಯಾಯಿನಿ ಬಾಲಕಿಯ ವಿರುದ್ಧ ಜಾತಿ ನಿಂದನೆ ಮಾಡಿದ್ದ ಆರೋಪವೂ ಕೇಳಿಬಂದಿದೆ.

ಆಗಸ್ಟ್ 24 ರಂದು 16ರ ಹರೆಯದ ಬಾಲಕಿ ನರ್ಸಿಂಗ್ ಕೋರ್ಸ್ ಓದುವ ಉದ್ದೇಶದಿಂದ ತನ್ನ ತಾಯಿಯೊಂದಿಗೆ ಉಸಿಲಂಪಟ್ಟಿಯ ಸರಕಾರಿ ಮಾದರಿ ಮಾಧ್ಯಮಿಕ ಶಾಲೆಗೆ ಪ್ರವೇಶಾತಿಗಾಗಿ ಹೋಗಿದ್ದಳು. ಸಂದರ್ಶನದ ವೇಳೆ ತನ್ನ ತಾಯಿ ಕೈ ಮುಗಿದು ನಮ್ರವಾಗಿ ನಿಂತಿರುವುದನ್ನು ಗಮನಿಸಿದ್ದ ಬಾಲಕಿ ಆ ಭಂಗಿಯನ್ನು ಬದಲಿಸುವಂತೆ ಸನ್ನೆ ಮಾಡಿ ಕೈಯನ್ನು ನೇರಗೊಳಿಸಿದ್ದಳು. ಇದರಿಂದ ಕೋಪಗೊಂಡ ಮುಖ್ಯೋಪಾಧ್ಯಾಯಿನಿ ವಿದ್ಯಾರ್ಥಿನಿಗೆ ದುರಹಂಕಾರಿ ಎಂದು ಹೀಯಾಳಿಸಿ ಜಾತಿ ನಿಂದನೆ ಮಾಡಿದ್ದರು.

ಇದರಿಂದ ನೊಂದ ಬಾಲಕಿ ಮರುದಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಆರಂಭದಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆ.28ರಂದು ಪ್ರಕರಣವನ್ನು ಬದಲಾಯಿಸಿ, ಬಿಎನ್‌ಎಸ್ ಅಡಿ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಸೇರಿಸಿ ಮುಖ್ಯೋಪಾಧ್ಯಾಯಿನಿಯನ್ನು ಎಫ್‌ಐಆರ್‌ನಲ್ಲಿ ಹೆಸರಿಸಿದ್ದಾರೆ. ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ಅನ್ವಯಿಸಬಹುದೇ ಎಂದು ಪರಿಶೀಲಿಸುತ್ತಿದ್ದಾರೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor