×
Ad

ಮೋದಿ ಸರಕಾರ ಕಂತುಗಳಲ್ಲಿ ಜನರ ಹಣ ಲೂಟಿಗೈಯುತ್ತಿದೆ: ತೈಲ ಬೆಲೆಯೇರಿಕೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

Update: 2026-05-23 20:26 IST

ನರೇಂದ್ರ ಮೋದಿ , ಮಲ್ಲಿಕಾರ್ಜುನ ಖರ್ಗೆ | Photo Credit : PTI 

ಹೊಸದಿಲ್ಲಿ, ಮೇ 23: ಕಳೆದ ಎಂಟು ದಿನಗಳಲ್ಲಿ ಮೂರನೇ ಬಾರಿ ತೈಲ ಬೆಲೆಯೇರಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರಕಾರವು ದೇಶದ ಜನರ ಹಣವನ್ನು ಕಂತುಗಳಲ್ಲಿ ಲೂಟಿ ಮಾಡುತ್ತಿದೆಯೆಂದು ಆಪಾದಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ‘‘ಸರಕಾರದಲ್ಲಿ ನಾಯಕತ್ವದ ಬಿಕ್ಕಟ್ಟು ತಲೆದೋರಿದೆ. ಪ್ರಸಕ್ತ ಸನ್ನಿವೇಶಗಳು ಇತರ ದೇಶಗಳ ಸರಕಾರಗಳು ತಮ್ಮ ಜನರಿಗೆ ನಿರಾಳವನ್ನುಂಟುಮಾಡುವ ಕ್ರಮಗಳನ್ನು ಕೈಗೊಂಡಿದೆಯಾದರೂ, ಬಿಜೆಪಿ ಸರಕಾರವು ದೇಶದ ಜನರ ಹಣವನ್ನು ದೋಚುವುದನ್ನು ಮುಂದುವರಿಸಿದೆ’’ ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘‘ಪೆಟ್ರೋಲ್ ದರ ಈಗ ಲೀಟರ್‌ಗೆ 100 ರೂ.ದಾಟಿದೆ. ಸಾರ್ವಜನಿಕರ ಸಂಪಾದನೆಯನ್ನು ಕಂತುಗಳಲ್ಲಿ ಲೂಟಿಗೈಯುತ್ತಿದೆ. ಪೆಟ್ರೋಲ್-ಡೀಸೆಲ್ ಮೇಲೆ 1 ಸಾವಿರ ಕೋಟಿ ರೂ. ದಿನಂಪ್ರತಿ ಕೇಂದ್ರ ತೆರಿಗೆಯನ್ನು ವಿಧಿಸಿದ ಬಳಿಕವೂ ಬಿಜೆಪಿ ತೃಪ್ತವಾಗಿಲ್ಲ. ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಕಡಿಮೆಯಿದ್ದಾಗಲೂ, ಅವರು ಅದರ ಪ್ರಯೋಜನಗಳನ್ನು ಜನಸಾಮಾನ್ಯರಿಗೆ ವರ್ಗಾಯಿಸಲಿಲ್ಲ. ಅದರ ಬದಲಿಗೆ ಅವರನ್ನು ಅವಿರತವಾಗಿ ಲೂಟಿ ಮಾಡುತ್ತಲೇ ಇದ್ದರು ’’ಎಂದು ಖರ್ಗೆ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಇಂಧನ ಬಿಕ್ಕಟ್ಟು ಉಂಟಾದಾಗ, ಬಿಜೆಪಿ ನಾಯಕತ್ವವು ಚುನಾವಣೆಗಳಲ್ಲಿ ಮಗ್ನವಾಗಿತ್ತು. ಚುನಾವಣೆಯ ಆನಂತರ ಅದು ಜನರು ತ್ಯಾಗ ಮಾಡಬೇಕೆಂದು ಬೋಧಿಸಿತು. ಆನಂತರ ಕೇವಲ 8 ದಿನಗಳಲ್ಲಿ ಅವರು ಮೂರು ಬಾರಿ ಪೆಟ್ರೋಲ್-ಡೀಸೆಲ್ ದರವನ್ನು ಏರಿಕೆ ಮಾಡಿದ್ದಾರೆ’’ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇತರ ದೇಶಗಳ ಸರಕಾರಗಳು ತಮ್ಮ ಪ್ರಜೆಗಳ ಹೊರೆಯನ್ನು ಕಡಿಮೆಗೊಳಿಸಲು ಕೈಗೊಂಡಿರುವ ಕ್ರಮಗಳನ್ನು ಕೂಡಾ ಖರ್ಗೆ ಅವರು ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇಟಲಿಯು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಮೂಲಕ ತನ್ನ ನಾಗರಿಕರು ತುಸು ನಿರಾಳವಾಗುವಂತೆ ಮಾಡಿದ್ದರೆ, ಆಸ್ಟ್ರೇಲಿಯವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ಸುಮಾರು 17ರೂ.ವರೆಗೆ ಕಡಿತಗೊಳಿಸಿದೆ ಎಂದರು.

ಜರ್ಮನಿಯು ತೈಲದ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸಿದ್ದರೆ, ತೈಲ ದರವನ್ನು ಲೀಟರ್‌ಗೆ 17-19ರೂ. ಕಡಿತಗೊಳಿಸಿದೆ. ಬ್ರಿಟನ್, ಪ್ರತಿ ಕುಟುಂಬಗಳಿಗೆ 100 ಪೌಂಡ್‌ಗಳಷ್ಟು ತೈಲ ನೆರವು ಹಾಗೂ ಇಂಧನ ಮತ್ತು ವಿದ್ಯುತ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದೆ ಎಂದರು.

‘‘ನರೇಂದ್ರ ಮೋದಿಜೀಯವರೇ ಈ ಕಂತುಗಳಲ್ಲಿ ನಡೆಯುವ ಲೂಟಿಯಲ್ಲಿ ಯಾರೆಲ್ಲಾ ಪಾಲು ಪಡೆದುಕೊಳ್ಳುತ್ತಿದ್ದಾರೆ? ಎಂಬುದನ್ನು ನಮಗೆ ತಿಳಿಸಿ. ನೀವ್ಯಾಕೆ ರಾಜಿ ಮಾಡಿಕೊಂಡಿದ್ದೀರಿ?. ನಾಯಕತ್ವವೇ ಈ ಸರಕಾರ ಎದುರಿಸುತ್ತಿರುವ ನಿಜವಾದ ಬಿಕ್ಕಟ್ಟೆಂಬುದನ್ನು 140 ಕೋಟಿ ಭಾರತೀಯರು ಅರಿತುಕೊಂಡಿದ್ದಾರೆ’’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News