‘ಫಾರಂ 7’ ಸಮರ್ಥನೆ ಬೆನ್ನಲ್ಲೇ ಬಿ.ಎಲ್. ಸಂತೋಷ್ ಗೆ ECI ನಿಯಮಗಳ ಪಾಠ ಹೇಳಿದ ಮುಹಮ್ಮದ್ ಝುಬೇರ್: ಮತದಾರರ ಮ್ಯಾಪಿಂಗ್ ಮತ್ತು ನಮೂನೆ 6 ಬಳಕೆ ಬಗ್ಗೆ ಗಂಭೀರ ಪ್ರಶ್ನೆ
ತಮ್ಮ ಹೆಸರಿನ SIR ನೋಟಿಸ್ ಗೆ ಬಿಜೆಪಿ ನಾಯಕ ನೀಡಿದ ವಿವರಣೆಯನ್ನೇ ತಳ್ಳಿಹಾಕಿದ ಫ್ಯಾಕ್ಟ್-ಚೆಕರ್
ಬಿ.ಎಲ್. ಸಂತೋಷ್ | ಮುಹಮ್ಮದ್ ಝುಬೇರ್ Photo: x.com/blsanthosh/zoo_bear
ಬೆಂಗಳೂರು : ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಆಕ್ಷೇಪಣೆ ಸಲ್ಲಿಸುವ 'ಫಾರಂ 7' ಬಳಕೆಯನ್ನು ಸಮರ್ಥಿಸಿಕೊಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್, ಈಗ ಸ್ವತಃ ಚುನಾವಣಾ ಆಯೋಗದ ನಿಯಮಗಳ ಕುರಿತ ಪ್ರಶ್ನೆಗಳನ್ನು ಎದುರಿಸುವಂತಾಗಿದೆ. ಅವರಿಗೆ ಜಾರಿಯಾಗಿದ್ದ SIR ನೋಟಿಸ್ ಗೆ ನೀಡಿದ ಸಮರ್ಥನೆಯನ್ನು ಫ್ಯಾಕ್ಟ್-ಚೆಕರ್ ಮುಹಮ್ಮದ್ ಝುಬೇರ್ ತಳ್ಳಿಹಾಕಿದ್ದು, ಆಯೋಗದ ನಿಯಮಾವಳಿಗಳನ್ನು ಉಲ್ಲೇಖಿಸಿ ಹಲವು ಲೋಪಗಳನ್ನು ತೆರೆದಿಟ್ಟಿದ್ದಾರೆ.
ವಿವಾದದ ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದ ಸಂತೋಷ್, ಫಾರಂ 7 ಅನ್ನು ಸಲ್ಲಿಸುವುದು ಬೂತ್ ಮಟ್ಟದ ಏಜೆಂಟರ ಹಕ್ಕು ಮತ್ತು ಕರ್ತವ್ಯ ಎಂದಿದ್ದರು. ನಿಯಮಬಾಹಿರವಾಗಿದ್ದರೆ ಅಥವಾ ಮಿತಿ ಮೀರಿದ್ದರೆ ಅಧಿಕಾರಿಗಳು ಅದನ್ನು ತಿರಸ್ಕರಿಸಬಹುದು, ಆದರೆ ಮೃತಪಟ್ಟ, ಸ್ಥಳಾಂತರಗೊಂಡ ಮತದಾರರ ಹೆಸರನ್ನು ಪಟ್ಟಿಯಲ್ಲಿ ಉಳಿಸಲು ಹರಸಾಹಸ ಪಡುವುದೇಕೆ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಯಾಗಿ ಝುಬೇರ್, ಹೊಸದಿಲ್ಲಿಯ ಮಾನ್ ಸಿಂಗ್ ರೋಡ್ ವ್ಯಾಪ್ತಿಯ ಮತದಾರರ ಪಟ್ಟಿಯ ವ್ಯತ್ಯಾಸ ದಾಖಲೆಯನ್ನು ಮುಂದಿಟ್ಟರು. ಅಲ್ಲಿ ಬಿ.ಎಲ್. ಸಂತೋಷ್ ಅವರ ಹೆಸರಿನ ಮುಂದೆ "ಹಿಂದಿನ SIR ಮ್ಯಾಪ್ ಆಗಿಲ್ಲ" (Unmapped with Last SIR) ಎಂದು ಉಲ್ಲೇಖವಾಗಿರುವುದನ್ನು ಅವರು ಗಮನಕ್ಕೆ ತಂದರು. ಬೂತ್ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲೇ ಅರ್ಜಿ ಸಲ್ಲಿಸಿದ್ದೆ ಎಂದು ಈ ಹಿಂದೆ ಹೇಳಿದ್ದ ಸಂತೋಷ್ ಅವರಿಗೂ ಈ ನೋಟಿಸ್ ಬಂದಿತ್ತೇ ಎಂದು ಝುಬೇರ್ ಕೇಳಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಂತೋಷ್, ಹಿಂದಿನ SIR ವೇಳೆ ತಾವು ದಿಲ್ಲಿಯ ಮತದಾರರಾಗಿರಲಿಲ್ಲ ಎಂದು ಸಮರ್ಥಿಸಿಕೊಂಡರು. ತಾವು 2019 ರಲ್ಲಿ 'ಫಾರಂ 6' ಮೂಲಕ ದಿಲ್ಲಿಯ ಮತದಾರರಾಗಿದ್ದು, ನೋಟಿಸ್ ಬಂದಿದ್ದರಿಂದ ಸೂಕ್ತ ಉತ್ತರ ನೀಡಿದ್ದೇನೆ ಎಂದು ಹೇಳಿದರು.
ಈ ಸ್ಪಷ್ಟನೆಯನ್ನು ಝುಬೇರ್ ಚುನಾವಣಾ ನಿಯಮಗಳ ಆಧಾರದಲ್ಲೇ ಅಲ್ಲಗಳೆದರು. ದಿಲ್ಲಿಯಲ್ಲಿ ಕೊನೆಯ SIR ನಡೆದದ್ದು 2002 ರಲ್ಲಿ, ಸಂತೋಷ್ ಹೇಳಿದಂತೆ 2003 ರಲ್ಲಿ ಅಲ್ಲ ಎಂದು ಅವರು ನೆನಪಿಸಿದರು. ದಿಲ್ಲಿಯ ಮತದಾರರಾಗಿರಲಿಲ್ಲ ಎಂಬ ಕಾರಣ ಮಾತ್ರಕ್ಕೆ ಹೆಸರನ್ನು ಮ್ಯಾಪಿಂಗ್ ಆಗಿಲ್ಲ ಎಂದು ಗುರುತಿಸಲು ಬರುವುದಿಲ್ಲ ಎಂದರು. ನಿಯಮಾವಳಿಗಳ ಪ್ರಕಾರ, ಬೇರೆ ರಾಜ್ಯಗಳಿಂದ ದಿಲ್ಲಿಗೆ ಬಂದ ಮತದಾರರನ್ನು ಅವರ ಹಿಂದಿನ ರಾಜ್ಯದ ಎಸ್‌ಐಆರ್ ಪಟ್ಟಿಗೆ ಅಥವಾ ಪೋಷಕರ ವಿವರಗಳಿಗೆ ಜೋಡಿಸಲು ಅವಕಾಶವಿದೆ. ಕರ್ನಾಟಕ ಅಥವಾ ಬೇರೆಡೆಯಿಂದ ಬಂದಿದ್ದರೂ ಈ ಜೋಡಣೆಗೆ ಅಡ್ಡಿಯಾಗುವುದಿಲ್ಲ ಎಂದು ಝುಬೇರ್ ಸ್ಪಷ್ಟಪಡಿಸಿದರು.
ಜೊತೆಗೆ, ದಿಲ್ಲಿ ಮತದಾರರ ಪಟ್ಟಿಗೆ ಸೇರಲು 'ಫಾರಂ 6' ಬಳಸಿದ್ದನ್ನೂ ಝುಬೇರ್ ಆಕ್ಷೇಪಿಸಿದರು. ಫಾರಂ 6 ಹೊಸದಾಗಿ ಮತದಾರರಾಗುವವರಿಗೆ ಮಾತ್ರ ಅನ್ವಯಿಸುತ್ತದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಸಸ್ಥಳ ಬದಲಾಯಿಸಿದಾಗ 'ಫಾರಂ 8' ಬಳಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು. ಈಗಾಗಲೇ ಮತದಾರರಾಗಿದ್ದವರನ್ನು ಹೊಸ ಮತದಾರರಂತೆ ನೋಂದಾಯಿಸಿದ್ದು ಸರಿಯೇ ಎಂಬ ಸಂಶಯವನ್ನು ಅವರು ಎತ್ತಿದರು.
ಈ ತಾಂತ್ರಿಕ ಲೋಪಗಳನ್ನು ಉಲ್ಲೇಖಿಸಿ ಝುಬೇರ್, ಸಾಮಾನ್ಯ ನಾಗರಿಕರ ಸ್ಥಿತಿಯನ್ನು ಮುನ್ನೆಲೆಗೆ ತಂದರು. ಹಿರಿಯ ರಾಜಕೀಯ ನಾಯಕರಿಗೆ ಸಿಗುವ ಆಡಳಿತಾತ್ಮಕ ನೆರವು ಸಾಮಾನ್ಯ ಜನರಿಗೆ ಸಿಗುವುದಿಲ್ಲ. ಲಕ್ಷಾಂತರ ವಲಸೆ ಮತದಾರರಿಗೆ ಇಂತಹ ನೋಟಿಸ್ ಬಂದರೆ ಅವರು ಈ ತೊಡಕುಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂದು ಕೇಳಿದರು.
ಕರ್ನಾಟಕದಲ್ಲಿ ಫಾರಂ 7 ರ ವ್ಯಾಪಕ ಬಳಕೆಯ ಕುರಿತು ಭಾರಿ ರಾಜಕೀಯ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ಕೊಪ್ಪ, ಬಳ್ಳಾರಿ ಮತ್ತು ವಿಜಯಪುರಗಳಲ್ಲಿ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಕೈಬಿಡಲು ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಮತದಾರರ ಪರಿಶೀಲನೆ ಅರ್ಹರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಾಗಬೇಕೇ ಹೊರತು, ತಾಂತ್ರಿಕ ನೆಪಗಳ ಮೂಲಕ ನಿಜವಾದ ಮತದಾರರನ್ನು ಹೊರದಬ್ಬುವ ದಾರಿಯಾಗಬಾರದು ಎಂಬುದು ಈಗ ಎದ್ದಿರುವ ಚರ್ಚೆಯಾಗಿದೆ.