Madhya Pradesh | ಗೋಸಾಗಟ ಮಾಡುತ್ತಿದ್ದ ವ್ಯಕ್ತಿಯನ್ನು ಥಳಿಸಿ ಹತ್ಯೆ ಪ್ರಕರಣ: 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ನರ್ಮದಾಪುರಂ, ಜೂ.13: 2022ರಲ್ಲಿ ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿ ಗೋ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಅಪರಾಧಿಗಳಿಗೆ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ನರ್ಮದಾಪುರಂ ಜಿಲ್ಲೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು, ದೀಪಕ್ ಅಲಿಯಾಸ್ ಬಾಬಾ ಕೆವಾತ್, ಅಜಯ್ ಅಲಿಯಾಸ್ ಅಜ್ಜು ರಾಥೋಡ್, ಪ್ರಕಾಶ್ ಕೌಶಲ್, ಪವನ್ ಬಾಥಮ್, ಅಮರ್ ಅಲಿಯಾಸ್ ಭೋಲಾ ಬಾಥಮ್, ಕನ್ಹಯ್ಯ ಬಾಥಮ್ ಹಾಗೂ ಬಲ್ಲು ಅಲಿಯಾಸ್ ಅನುಜ್ ರಘುವಂಶಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 148, 307/149 ಮತ್ತು 302/149ರ ಅಡಿಯಲ್ಲಿ ತಪ್ಪಿತಸ್ಥರು ಎಂದು ಘೋಷಿಸಿದರು.
ಪ್ರಾಸಿಕ್ಯೂಷನ್ ಪ್ರಕಾರ, 2022ರ ಆಗಸ್ಟ್ 2–3ರ ರಾತ್ರಿ ಟ್ರಕ್ ಚಾಲಕ ಶೇಖ್ ಲಾಲಾ, ನಝೀರ್ ಅಹ್ಮದ್ ಹಾಗೂ ಶೇಖ್ ಮುಸ್ತಾಕ್ ಅವರೊಂದಿಗೆ ನಂದರವಾಡಾದಿಂದ ಮಹಾರಾಷ್ಟ್ರದ ಕಡೆಗೆ ಗೋವುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಸಿಯೋನಿ ಮಾಲ್ವಾ ವ್ಯಾಪ್ತಿಯ ಬರಾಖಾದ್ ಗ್ರಾಮದ ಬಳಿ ಗ್ರಾಮಸ್ಥರ ಗುಂಪೊಂದು ಟ್ರಕ್ ತಡೆದು, ಕೋಲುಗಳು ಹಾಗೂ ಲಾಠಿಗಳಿಂದ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ನಝೀರ್ ಅಹ್ಮದ್ ಮೃತಪಟ್ಟಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗಳು ಲಾಠಿ ಮತ್ತು ಕೋಲುಗಳನ್ನು ಹಿಡಿದು ಗುಂಪಾಗಿ ಸೇರಿ ನಝೀರ್ ಅಹ್ಮದ್ ಹಾಗೂ ಇತರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದೆ.
ಮರಣೋತ್ತರ ಪರೀಕ್ಷಾ ವರದಿಯಲ್ಲಿ ಆರೋಪಿಗಳು ನಝೀರ್ ಅಹ್ಮದ್ ಹಾಗೂ ಇತರರ ಮೇಲೆ ಕೋಲು ಮತ್ತು ಲಾಠಿಗಳಿಂದ ಹಲ್ಲೆ ನಡೆಸಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ನಝೀರ್ ಅಹ್ಮದ್ ಬಳಿಕ ಮೃತಪಟ್ಟಿದ್ದರು ಎಂದು ನ್ಯಾಯಾಲಯ ಉಲ್ಲೇಖಿಸಿದೆ.
ಪ್ರಕರಣವು ಮರಣದಂಡನೆ ವಿಧಿಸಬೇಕಾದ ಅಪರೂಪದ ಪ್ರಕರಣವಲ್ಲ ಎಂದು ಹೇಳಿದ ನ್ಯಾಯಾಲಯ, ಏಳು ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ಕೊಲೆ ಯತ್ನ ಪ್ರಕರಣದಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಗಲಭೆ ಆರೋಪಕ್ಕೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಸೌಜನ್ಯ: livelaw.in