Bangladesh | ‘2024ರ ಪ್ರತಿಭಟನೆಗಳು ಸರ್ಕಾರ ಉರುಳಿಸಲು ರೂಪಿಸಿದ ಪಿತೂರಿ’: ಯೂನಸ್ ವಿರುದ್ಧ ಶೇಖ್ ಹಸೀನಾ ವಾಗ್ದಾಳಿ
ಅಧಿಕಾರದಿಂದ ಪದಚ್ಯುತರಾದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ಮಾಜಿ ಪ್ರಧಾನಿ
ಶೇಖ್ ಹಸೀನಾ | Photo Credit ; PTI
ಹೊಸದಿಲ್ಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರದಿಂದ ಪದಚ್ಯುತರಾದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, 2024ರ ಜುಲೈ–ಆಗಸ್ಟ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳು ತಮ್ಮ ಸರ್ಕಾರವನ್ನು ಉರುಳಿಸಲು ರೂಪಿಸಲಾದ ಪಿತೂರಿಯ ಭಾಗವಾಗಿದ್ದವು ಎಂದು ಆರೋಪಿಸಿದರು. ಮಧ್ಯಂತರ ಆಡಳಿತದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರೇ ಆ ಪಿತೂರಿಯ ಸತ್ಯವನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಿದ ಅವರು, ತಮ್ಮ ಸರ್ಕಾರ ಆರಂಭಿಸಿದ್ದ ಹಿಂಸಾಚಾರದ ತನಿಖೆಯನ್ನು ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಸ್ಥಗಿತಗೊಳಿಸಿದೆ ಎಂದೂ ಹೇಳಿದರು.
ಹೊಸದಿಲ್ಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಗಳವಾರ, 2024ರ ಆಗಸ್ಟ್ 5ರಂದು ಬಾಂಗ್ಲಾದೇಶ ತೊರೆದ ಬಳಿಕ ವರ್ಚುವಲ್ ಆಗಿ ಧ್ವನಿ ಸಂದೇಶದ ಮೂಲಕ ಇದೇ ಮೊದಲ ಬಾರಿಗೆ ಶೇಖ್ ಹಸೀನಾ ಸಾರ್ವಜನಿಕವಾಗಿ ಭಾಷಣ ಮಾಡಿದರು.
ಭಾಷಣದ ಆರಂಭದಲ್ಲಿ ಆಗಸ್ಟ್ 1975ರಲ್ಲಿ ನಡೆದ ಹತ್ಯಾಕಾಂಡದಲ್ಲಿ ಮೃತಪಟ್ಟ ತಮ್ಮ ತಂದೆ ಹಾಗೂ ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್, ಕುಟುಂಬದ ಸದಸ್ಯರು ಮತ್ತು 1971ರ ವಿಮೋಚನಾ ಯುದ್ಧದ ಹುತಾತ್ಮರನ್ನು ಸ್ಮರಿಸಿದ ಅವರು ಭಾವುಕರಾದರು.
ಜುಲೈ–ಆಗಸ್ಟ್ 2024ರ ಅಶಾಂತಿ ಆರಂಭದಿಂದಲೇ ಶಾಂತಿಯುತ ವಿದ್ಯಾರ್ಥಿ ಚಳುವಳಿಯಾಗಿರಲಿಲ್ಲ ಎಂದು ಆರೋಪಿಸಿದ ಹಸೀನಾ, ತಮ್ಮ ಸರ್ಕಾರ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿತ್ತು, ಹೈಕೋರ್ಟ್ ನ ಕೋಟಾ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು ಮತ್ತು ವಿದ್ಯಾರ್ಥಿ ನಾಯಕರನ್ನು ಸಂವಾದಕ್ಕೆ ಆಹ್ವಾನಿಸಿತ್ತು ಎಂದು ಹೇಳಿದರು. ಆದರೂ, ಕೋಟಾ ಚಳುವಳಿಯನ್ನು ಆಡಳಿತ ಬದಲಾವಣೆಯ ಏಕೈಕ ಗುರಿಯ ಚಳುವಳಿಯಾಗಿ ಪರಿವರ್ತಿಸಿ, ಸಂಘಟಿತ ಗುಂಪುಗಳು ಹಿಂಸಾಚಾರ ನಡೆಸಿದವು ಎಂದು ಆರೋಪಿಸಿದರು.
ಅಶಾಂತಿಯ ವೇಳೆ 450ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಲಾಯಿತು, ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ನಡೆಸಲಾಯಿತು ಮತ್ತು ಅಧಿಕಾರಿಗಳನ್ನು ಹತ್ಯೆ ಮಾಡಲಾಯಿತು ಎಂದು ಅವರು ಆರೋಪಿಸಿದರು. ಕೆಲ ಪೊಲೀಸ್ ಸಿಬ್ಬಂದಿಯನ್ನು ಠಾಣೆಗಳೊಳಗೇ ಜೀವಂತವಾಗಿ ಸುಟ್ಟುಹಾಕಲಾಯಿತು ಎಂದು ಹೇಳಿದ ಅವರು, ಇಂತಹ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಕಾನೂನು ಜಾರಿ ಸಂಸ್ಥೆಗಳ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದರು.
ಜುಲೈ 18, 2024ರಂದು ನಡೆದ ಪ್ರತಿಯೊಂದು ಸಾವು ಮತ್ತು ಹಿಂಸಾಚಾರದ ಘಟನೆಯ ತನಿಖೆಗಾಗಿ ತಮ್ಮ ಸರ್ಕಾರ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಿತ್ತು. ಆದರೆ, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತನಿಖೆಯನ್ನು ಸ್ಥಗಿತಗೊಳಿಸಿತು ಎಂದು ಹಸೀನಾ ಆರೋಪಿಸಿದರು. ಹಿಂಸಾಚಾರದಲ್ಲಿ ಭಾಗಿಯಾಗಿದ್ದವರಿಗೆ, ಪೊಲೀಸರನ್ನು ಹತ್ಯೆ ಮಾಡಿದವರಿಗೂ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿದ ಅವರು, "ನಿಜವಾಗಿಯೂ ನ್ಯಾಯ ಬೇಕಿದ್ದರೆ ತನಿಖೆಯನ್ನು ಏಕೆ ನಿಲ್ಲಿಸಿದರು?" ಎಂದು ಪ್ರಶ್ನಿಸಿದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು, ನ್ಯಾಯಾಧೀಶರು, ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಹಾಗೂ ರಿಕ್ಷಾ ಚಾಲಕರ ಮೇಲೂ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿದ ಹಸೀನಾ, 1971ರ ವಿಮೋಚನಾ ಯುದ್ಧವನ್ನು ಬೆಂಬಲಿಸುವವರನ್ನು ಗುರಿಯಾಗಿಸಲಾಗುತ್ತಿದೆ ಮತ್ತು ಶಿಕ್ಷೆಗೊಳಗಾಗಿದ್ದ ಉಗ್ರರನ್ನು ಬಿಡುಗಡೆ ಮಾಡಲಾಗಿದೆ ಎಂದೂ ಆರೋಪಿಸಿದರು.