NCERT ಪಠ್ಯದಲ್ಲಿ ಎಸ್‌ಐಆರ್‌ಗೆ ಶ್ಲಾಘನೆ; ಭಾರತೀಯ ಚುನಾವಣಾ ಆಯೋಗದ ಗುಣಗಾನ
ಸಾಂದರ್ಭಿಕ ಚಿತ್ರ | Photo Credit : NCERT
ಹೊಸದಿಲ್ಲಿ,ಜೂ.26: ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಈಗ ಎನ್‌ಸಿಇಆರ್‌ಟಿಯ 9ನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದ ಭಾಗವಾಗಿದೆ. ಮತದಾರ ಪಟ್ಟಿಯಿಂದ ಯಾವುದೇ ಅರ್ಹ ನಾಗರಿಕನು ಹೊರಗುಳಿಯದಂತೆ ಹಾಗೂ ಯಾವುದೇ ಅನರ್ಹ ವ್ಯಕ್ತಿಯು ಮತದಾರಪಟ್ಟಿಯಲ್ಲಿ ಸೇರ್ಪಡೆಗೊಳ್ಳದಿರುವುದನ್ನು ಎಸ್‌ಐಆರ್ ಖಾತರಿಪಡಿಸುತ್ತದೆ ಎಂದು ಪಠ್ಯದಲ್ಲಿ ಬಣ್ಣಿಸಲಾಗಿದೆ.
ಸುಳ್ಳು ಸುದ್ದಿಗಳು, ತಪ್ಪು ಮಾಹಿತಿ ಹಾಗೂ ಬೆದರಿಕೆಯಂತಹ ಸವಾಲುಗಳ ಹೊರತಾಗಿಯೂ ನಿಷ್ಪಕ್ಷಪಾತವಾದ ಚುನಾವಣೆಗಳನ್ನು ನಡೆಸುತ್ತಾ ಬಂದಿರುವುದಕ್ಕಾಗಿ ಭಾರತೀಯ ಚುನಾವಣಾಆಯೋಗ (ಇಸಿಐ)ವನ್ನು ಕೂಡಾ ಎನ್‌ಸಿಇಆಆರ್‌ಟಿ ಪಠ್ಯವು ಶ್ಲಾಘಿಸಿದೆ.
‘‘ಭಾರತೀಯ ಚುನಾವಣಾ ಆಯೋಗ (ಇಸಿಐ)ವು ಮತದಾರಪಟ್ಟಿಯ ತಾಜಾಗೊಳಿಸುವಿಕೆ, ದೃಢೀಕರಿಸುವಿಕೆ ಹಾಗೂ ಸರಿಪಡಿಸುವಿಕೆಯ ಕಾರ್ಯದಲ್ಲಿ ತೊಡಗಿದೆ. ಎಸ್‌ಐಆರ್ ಮೂಲಕ ಯಾವುದೇ ಅರ್ಹ ವ್ಯಕ್ತಿಯು ಮತದಾರಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಯಾವುದೇ ಅನರ್ಹ ವ್ಯಕ್ತಿಯು ಮತದಾರಪಟ್ಟಿಗೆ ಸೇರ್ಪಡೆಗೊಳ್ಳದಂತೆ ನೋಡಿಕೊಂಡಿದೆ’’ ಎಂದು ಎನ್‌ಸಿಇಆರ್‌ಟಿ ಪಠ್ಯದಲ್ಲಿ ಪ್ರಶಂಸಿಸಲಾಗಿದೆ.
‘‘ಈ ಪ್ರಕ್ರಿಯೆಯು ಎಲ್ಲಾ ಮತದಾರರು ಅದರಲ್ಲೂ ವಿಶೇಷವಾಗಿ 18 ವರ್ಷಕ್ಕೆ ಕಾಲಿರಿಸಿದ ಯುವ ಮತದಾರರನ್ನು ಹಾಗೂ ಇತರ ಯಾವುದೇ ಕಾರಣಕ್ಕಾಗಿ ಅರಿವಿನ ಮತದಾರಪಟ್ಟಿಗೆ ಸೇರ್ಪಡೆಗೊಳಿಸುವುದನ್ನು ಖಾತರಿಪಡಿಸುತ್ತದೆ’’ ಎಂದು ಅಂಡರ್‌ಸ್ಟಾಂಡಿಂಗ್ ಸೊಸೈಟಿ: ಇಂಡಿಯಾ ಆ್ಯಂಡ್ ಬಿಯೊಂಡ್ (ಸಮಾಜವನ್ನು ಅರಿತುಕೊಳ್ಳುವಿಕೆ ಭಾರತ ಹಾಗೂ ಅದರಾಚೆಗೆ) ಶೀರ್ಷಿಕೆಯ ಪಠ್ಯದ ಒಂದು ವಿಭಾಗದಲ್ಲಿ ಬರೆಯಲಾಗಿದೆ.
ಮತದಾರ ಮೃತನಾದಾಗ, ವಾಸ್ತವ್ಯ ಬದಲಾದಾಗ, ಮತದಾರನು ಶಾಶ್ವತವಾಗಿ ಪತ್ತೆಯಾಗದೆ ಇದ್ದಲ್ಲಿ ಅವರ ಹೆಸರುಗಳನ್ನು ಎಸ್‌ಐಆರ್ ಮೂಲಕ ತೆಗೆದುಹಾಕಲಾಗುತ್ತದೆಯೆಂದು ಪಠ್ಯದಲ್ಲಿ ಹೇಳಲಾಗಿದೆ.
ಮತದಾರಪಟ್ಟಿಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತಿದೆ. ಮತದಾರಪಟ್ಟಿಯು ಸಕಾಲಿಕ (ಅಪ್ ಟುಡೇಟ್) ವಾಗಿದೆಯೇ ಎಂಬುದನ್ನು ಖಾತರಿಪಡಿಸಲು ಎಸ್‌ಐಆರ್ ನಡೆಸಲಾಗುತ್ತದೆ ಎಂದು ಎನ್‌ಸಿಇಆರ್‌ಟಿ 9ನೇ ತರಗತಿಯ ಪಠ್ಯದಲ್ಲಿ ಹೇಳಲಾಗಿದೆ.
ಈವರೆಗೆ ದೇಶಾದ್ಯಂತ ಮತದಾರಪಟ್ಟಿಯಿಂದ ಸುಮಾರು 6 ಕೋಟಿ ಮಂದಿಯ ಹೆಸರುಗಳನ್ನು ತೆಗೆದುಹಾಕಿರುವ ಎಸ್‌ಐಆರ್ ಪ್ರಕ್ರಿಯೆಯು ಪ್ರತಿಪಕ್ಷಗಳು ಹಾಗೂ ಭಾರತೀಯ ಚುನಾವಣಾ ಆಯೋಗದ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದೆ. ಎಸ್‌ಐಆರ್ ಜಾರಿಗೊಂಡು 1 ವರ್ಷ ಪೂರ್ಣಗೊಂಡಿದ್ದು, 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂದುವರಿದಿದೆ.