ದಿಲ್ಲಿ | ರಸ್ತೆ ಅಪಘಾತದಿಂದ ಉದ್ಯೋಗ ಕಳೆದುಕೊಂಡ ಎಂಸಿಡಿ ನೌಕರನಿಗೆ 1.06 ಕೋಟಿ ರೂ.ಪರಿಹಾರ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜೂ.26: 2021ರ ಟ್ರಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಿಲ್ಲಿ ಮಹಾನಗರ ಪಾಲಿಕೆಯ (ಎಂಸಿಡಿ) ಮಾಜಿ ಜವಾನನಿಗೆ 1.06 ಕೋ.ರೂ.ಗೂ ಅಧಿಕ ಪರಿಹಾರವನ್ನು ನೀಡುವಂತೆ ದಿಲ್ಲಿ ಮೋಟರ್ ಅಪಘಾತ ದಾವೆಗಳ ನ್ಯಾಯಾಧಿಕರಣವು ಆದೇಶಿಸಿದೆ. ಅಪಘಾತದ ಗಾಯಗಳಿಂದಾಗಿ ಅವರು ಜೀವನೋಪಾಯಕ್ಕೆ ಆದಾಯ ಗಳಿಸುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದು ನ್ಯಾಯಾಧಿಕರಣವು ಎತ್ತಿ ಹಿಡಿದಿದೆ.
ಅಪಘಾತದ ಸಮಯದಲ್ಲಿ 57 ವರ್ಷ ವಯಸ್ಸಿನವರಾಗಿದ್ದ ಬಿಷನ್ ದತ್ ಶರ್ಮಾ ಅವರು ಸಲ್ಲಿಸಿದ್ದ ಹಕ್ಕು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧಿಕರಣದ ಅಧ್ಯಕ್ಷ ಧರ್ಮೇಂದ್ರ ಸಿಂಗ್ ಅವರು ಈ ತೀರ್ಪನ್ನು ಹೊರಡಿಸಿದ್ದಾರೆ.
ಜೂನ್ 30,2021ರಂದು ದ್ವಾರಕಾದ ಧುಲ್ಸಿರಸ್ ಚೌಕ್‌ನಲ್ಲಿ ನೂರ್ ಅಲಿ ಎಂಬಾತ ಅತಿವೇಗ ಮತ್ತು ಅಜಾಗ್ರತೆಯಿಂದ ಟ್ರಕ್ ಚಲಾಯಿಸಿ ಶರ್ಮಾರ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಸಾಬೀತಾಗಿದೆ. ಅಪಘಾತದಲ್ಲಿ ಶರ್ಮಾ ಅವರ ಎರಡೂ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು,ಅವರು ಶೇ.77 ರಷ್ಟು ಶಾಶ್ವತ ದೈಹಿಕ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದು ನ್ಯಾಯಾಧಿಕರಣವು ತನ್ನ ಜೂ.9ರ ಆದೇಶದಲ್ಲಿ ಹೇಳಿದೆ.
ಶರ್ಮಾ ಅವರಿಗೆ ಸರಿಯಾಗಿ ನಡೆಯಲು ಅಥವಾ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು ಸ್ವಯಂ ನಿವೃತ್ತಿ ಪಡೆಯುವವರೆಗೆ ಅವರು ರಜೆಯಲ್ಲಿದ್ದರು ಎನ್ನುವುದನ್ನು ಗಮನಿಸಿದ ನ್ಯಾಯಾಧಿಕರಣವು, ಅವರ ‘ಕಾರ್ಯನಿರ್ವಹಣೆಯ ಅಂಗವೈಕಲ್ಯ’ವನ್ನು ಶೇ.100 ರಷ್ಟು ಎಂದು ಪರಿಗಣಿಸಿದೆ.
ಅರ್ಜಿದಾರರ ವಯಸ್ಸು,ಶಿಕ್ಷಣ ಮತ್ತು ದೈಹಿಕ ಸ್ಥಿತಿಯನ್ನು ಪರಿಗಣಿಸಿದರೆ ಅವರು ತನ್ನ ಜೀವನೋಪಾಯಕ್ಕಾಗಿ ಯಾವುದೇ ಕೆಲಸವನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಕಾರ್ಯನಿರ್ವಹಣೆಯ ಅಂಗವೈಕಲ್ಯವನ್ನು ಶೇಕಡಾ 100 ರಷ್ಟು ಎಂದು ನಿರ್ಧರಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ನ್ಯಾಯಾಧಿಕರಣವು ಒಟ್ಟು ಪರಿಹಾರ ಮೊತ್ತವನ್ನು 1.06 ಕೋ. ರೂ.ಗೆ ನಿಗದಿಗೊಳಿಸಿದ್ದು,ಅರ್ಜಿ ಸಲ್ಲಿಸಿದ ದಿನಾಂಕದಿಂದ ವಾರ್ಷಿಕ ಶೇ.7.5ರಷ್ಟು ಬಡ್ಡಿಯನ್ನೂ ನೀಡಬೇಕಾಗುತ್ತದೆ.
30 ದಿನಗಳ ಒಳಗಾಗಿ ಈ ಮೊತ್ತವನ್ನು ಜಮಾ ಮಾಡುವಂತೆ ನ್ಯಾಯಾಧಿಕರಣವು ಟ್ರಕ್‌ನ ವಿಮೆ ಕಂಪೆನಿಗೆ ನಿರ್ದೇಶಿಸಿದೆ.