Photo source: ncert.nic.in

ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (NCERT) ತನ್ನ ಪಠ್ಯಪುಸ್ತಕಗಳ ಕಳಪೆ ಮುದ್ರಣ ಗುಣಮಟ್ಟದ ಕುರಿತಾದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದೆ. ವಿಶೇಷವಾಗಿ ಕೆಲವು ಶಾಲಾ ಪುಸ್ತಕಗಳಲ್ಲಿನ ಅಕ್ಷರಗಳು ಮಸುಕಾಗಿರುವುದು ಮತ್ತು ಅಸ್ಪಷ್ಟವಾಗಿರುವ ಬಗ್ಗೆ ಕೇಳಿಬಂದಿರುವ ಆತಂಕಗಳನ್ನು ಮಂಡಳಿಯು ಗಮನಿಸಿದೆ.

‘ಮುದ್ರಣ ಗುಣಮಟ್ಟದ ಕುರಿತಾದ ದೂರುಗಳನ್ನು NCERT ಗಮನಿಸಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಆದ್ಯತೆಯ ಮೇರೆಗೆ ಪರಿಶೀಲಿಸುತ್ತಿದೆ. ಇದಕ್ಕೆ ಕಾರಣರಾದ ಯಾವುದೇ ಮುದ್ರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಮಗುವಿಗೂ ಸ್ಪಷ್ಟವಾದ, ಓದಲು ಯೋಗ್ಯವಾದ ಮತ್ತು ವಿದ್ಯಾರ್ಥಿ ಸ್ನೇಹಿ ಪಠ್ಯಪುಸ್ತಕಗಳನ್ನು ಒದಗಿಸಲು NCERT ಬದ್ಧವಾಗಿದೆ’ ಎಂದು ಮಂಡಳಿಯು ಸೋಮವಾರ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಅವರು 10ನೇ ತರಗತಿಯ ಪಠ್ಯಪುಸ್ತಕಗಳಲ್ಲಿನ ಮುದ್ರಣ ದೋಷಗಳನ್ನು ಎತ್ತಿ ತೋರಿಸಿದ ಬೆನ್ನಲ್ಲೇ ಮಂಡಳಿಯು ಈ ಕ್ರಮಕ್ಕೆ ಮುಂದಾಗಿದೆ.

‘ನನ್ನ ಮಗ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನ NCERT ಪಠ್ಯಪುಸ್ತಕವನ್ನು ನೋಡಿದ ನಂತರ ನನಗೆ ಮುದ್ರಣದ ಗುಣಮಟ್ಟದ ಬಗ್ಗೆ ತೀವ್ರ ಆತಂಕವಾಗಿದೆ. ಅಕ್ಷರಗಳು ತೀರಾ ಚಿಕ್ಕದಾಗಿದ್ದು, ಮಸುಕಾಗಿ ಮತ್ತು ಕಳಪೆಯಾಗಿ ಮುದ್ರಣಗೊಂಡಿವೆ. ಇದರಿಂದ ವಿದ್ಯಾರ್ಥಿಗಳಿಗೆ ಸುಲಲಿತವಾಗಿ ಓದಲು ಕಷ್ಟವಾಗುತ್ತಿದೆ ’ ಎಂದು ಜಿಂದಾಲ್ ಎಕ್ಸ್ ಪೋಸ್ಟ್‌ನಲ್ಲಿ ದೂರಿದ್ದರು.

ಇಂತಹ ಕಳಪೆ ಗುಣಮಟ್ಟದ ಪಠ್ಯಪುಸ್ತಕಗಳು ಶಾಲಾ ಮಕ್ಕಳಲ್ಲಿ ಅನಗತ್ಯವಾಗಿ ಕಣ್ಣಿನ ಒತ್ತಡ, ತಲೆನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವುದನ್ನು NCERT ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ನಂದಕುಮಾರ್ , ವಾರ್ತಾಭಾರತಿ

contributor