ಪಕ್ಷಾಂತರ ನಿಷೇಧ ಕಾನೂನಿನಲ್ಲಿ ಸುಧಾರಣೆ | ಕೇಂದ್ರ ಸರಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ: ಪಕ್ಷಾಂತರ ನಿಷೇಧ ಕಾನೂನಿನಲ್ಲಿ ಸಮಗ್ರ ಸುಧಾರಣೆಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಉತ್ತರಿಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಸರಕಾರ, ಚುನಾವಣಾ ಆಯೋಗ ಮತ್ತು ಕಾನೂನು ಆಯೋಗಕ್ಕೆ ನೋಟಿಸ್ ಹೊರಡಿಸಿದೆ.
ಅನರ್ಹತೆ ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಚುನಾಯಿತ ಸರಕಾರಗಳ ಅಸ್ತಿತ್ವದ ಮೇಲೆ ಪ್ರಭಾವ ಬೀರಲು ಜನಪ್ರತಿನಿಧಿಗಳು ತಮ್ಮ ರಾಜೀನಾಮೆಗಳನ್ನು ಕಾರ್ಯತಂತ್ರದ ಅಸ್ತ್ರವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿ ಎ.ಸೇತು ಎನ್ನುವವರು ಈ ಅರ್ಜಿ ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರ ಪೀಠವು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯಗಳಿಗೂ ನೋಟಿಸ್ ಹೊರಡಿಸಿದೆ.
ಸಂವಿಧಾನದ 10ನೇ ಶೆಡ್ಯೂಲ್ ಅಡಿಯಲ್ಲಿ ಅನರ್ಹತೆ ಪ್ರಕ್ರಿಯೆ ಬಾಕಿ ಇರುವಾಗ ಸಲ್ಲಿಸುವ ರಾಜೀನಾಮೆಗಳು ಸ್ವಯಂಚಾಲಿತವಾಗಿ ಅನರ್ಹತೆ ವಿಚಾರಣೆಯನ್ನು ರದ್ದುಗೊಳಿಸಬಾರದು ಎಂದು ಅರ್ಜಿಯಲ್ಲಿ ಕೋರಲಾಗಿದೆ. ರಾಜೀನಾಮೆಯ ನೈಜತೆ ಹಾಗೂ ಅನರ್ಹತೆ ಅರ್ಜಿಗಳ ಕುರಿತು ಸ್ಪೀಕರ್ ಅಥವಾ ಸಭಾಪತಿಗಳು ಕಾಲಮಿತಿಯೊಳಗೆ ಪಾರದರ್ಶಕ ಮತ್ತು ತರ್ಕಬದ್ಧ ಆದೇಶ ನೀಡಬೇಕು ಹಾಗೂ ಅತಂತ್ರ ವಿಧಾನಸಭೆಯಲ್ಲಿ ಸದನದಲ್ಲೇ ಬಹುಮತ ಸಾಬೀತುಪಡಿಸುವುದನ್ನು ಖಚಿತಪಡಿಸಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.