“ಯಾವುದೇ ರಾಜಿ ಇಲ್ಲ”: ಕ್ಷೇತ್ರ ಮರುವಿಂಗಡಣೆ ಮಸೂದೆ ವಿಚಾರದಲ್ಲಿ ಸ್ಟಾಲಿನ್ ಸ್ಪಷ್ಟ ನಿಲುವು
► ತಮಿಳುನಾಡಿನ ಲೋಕಸಭಾ ಸ್ಥಾನಗಳ ಪಾಲು ಕಡಿತಕ್ಕೆ ವಿರೋಧ ► 1971ರ ಜನಗಣತಿ ಆಧಾರಿತ ಪ್ರಾತಿನಿಧ್ಯ ಮುಂದಿನ 25 ವರ್ಷ ಮುಂದುವರಿಸಲು ಆಗ್ರಹ
ಎಂ.ಕೆ. ಸ್ಟಾಲಿನ್ | Photo Credit : PTI
ಚೆನ್ನೈ: ಕ್ಷೇತ್ರ ಮರುವಿಂಗಡಣೆ ಮಸೂದೆಯ ವಿಚಾರದಲ್ಲಿ ಡಿಎಂಕೆ ತನ್ನ ನಿಲುವಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ. ಡಿಎಂಕೆ ಬಿಜೆಪಿಯೊಂದಿಗೆ ಕೈಜೋಡಿಸಲು ಸಿದ್ಧವಾಗುತ್ತಿದೆ ಎಂದು ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಆರೋಪಿಸಿದ ಕೆಲವೇ ಗಂಟೆಗಳಲ್ಲಿ ಸ್ಟಾಲಿನ್ ಈ ಹೇಳಿಕೆ ನೀಡಿದ್ದಾರೆ.
ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯೊಂದಿಗೆ ಜೋಡಿಸಲಾಗಿರುವ ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವಕ್ಕೆ ಡಿಎಂಕೆ ಬೆಂಬಲ ನೀಡಬಹುದು ಎಂಬ ಊಹಾಪೋಹಗಳಿಗೂ ಅವರು ತೆರೆ ಎಳೆದಿದ್ದಾರೆ. ಪಕ್ಷದ ಎರಡು ಪ್ರಮುಖ ಬೇಡಿಕೆಗಳಿಗೆ ಬದ್ಧವಾಗಿರುವುದಾಗಿ ಪುನರುಚ್ಚರಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ 'ಇಂಡಿಯಾ' (INDIA) ಮೈತ್ರಿಕೂಟದಿಂದ ಹೊರಬಂದಿದ್ದ ಡಿಎಂಕೆ, ಲೋಕಸಭೆಯಲ್ಲಿ ತಮಿಳುನಾಡಿನ ಪ್ರಸ್ತುತ ಸ್ಥಾನಗಳ ಪಾಲನ್ನು ಉಳಿಸಿಕೊಳ್ಳುವ ಭರವಸೆ ದೊರೆತರೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಬಹುದು ಎಂಬ ಚರ್ಚೆಗಳು ನಡೆದಿದ್ದವು. ಪ್ರಸ್ತುತ ಲೋಕಸಭೆಯಲ್ಲಿ ಡಿಎಂಕೆಯ 22 ಸಂಸದರು ಇದ್ದಾರೆ.
ಡಿಎಂಕೆಯ ಎರಡು ಪ್ರಮುಖ ಬೇಡಿಕೆಗಳು
ಲೋಕಸಭೆಯ ಒಟ್ಟು ಸದಸ್ಯ ಬಲವನ್ನು ಹೆಚ್ಚಿಸಿದರೂ ತಮಿಳುನಾಡಿನ ಪ್ರಸ್ತುತ ಶೇ. 7.18ರಷ್ಟು ಸ್ಥಾನಗಳ ಪಾಲನ್ನು ಕಡಿಮೆ ಮಾಡಬಾರದು ಎಂಬುದು ಡಿಎಂಕೆಯ ಮೊದಲ ಬೇಡಿಕೆ. 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಪ್ರಮಾಣವನ್ನು ಮುಂದಿನ 25 ವರ್ಷಗಳವರೆಗೆ ಬದಲಾಯಿಸಬಾರದು ಎಂಬುದು ಎರಡನೇ ಬೇಡಿಕೆ.
"ಡಿಎಂಕೆ ಈ ಎರಡು ಬೇಡಿಕೆಗಳಿಗೆ ದೃಢವಾಗಿ ಬದ್ಧವಾಗಿದೆ ಮತ್ತು ಮುಂದೆಯೂ ಬದ್ಧವಾಗಿರಲಿದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಹೀಗಾಗಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ" ಎಂದು ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.
ಕ್ಷೇತ್ರ ಮರುವಿಂಗಡಣೆಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೊದಲ ಪಕ್ಷ ಡಿಎಂಕೆ ಎಂದು ಅವರು ಹೇಳಿದ್ದಾರೆ.
"ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಾಗಲಿ, ಬೆನ್ನಿಗೆ ಚೂರಿ ಹಾಕಿದವರ ಆರೋಪಗಳಾಗಲಿ ನಮ್ಮ ದೃಢ ನಿಶ್ಚಯವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಅಧಿಕಾರಕ್ಕಾಗಿ ತಮ್ಮ ತತ್ವಗಳನ್ನು ತ್ಯಜಿಸಿದ ನಾಚಿಕೆಗೇಡಿನ ಮತ್ತು ಕೃತಜ್ಞತೆಯಿಲ್ಲದ ಜನರು ಇದನ್ನು ಅರ್ಥಮಾಡಿಕೊಳ್ಳಬೇಕು" ಎಂದು ಸ್ಟಾಲಿನ್ ತಿರುಗೇಟು ನೀಡಿದ್ದಾರೆ.
ನ. 30ರಿಂದ ಸಂಸತ್ತಿನ ಅಲ್ಪಾವಧಿಯ ಅಧಿವೇಶನ ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ ಕ್ಷೇತ್ರ ಮರುವಿಂಗಡಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಮರುವಿಂಗಡಣೆಯ ಸುತ್ತಲಿನ ಲೆಕ್ಕಾಚಾರ
2029ರಿಂದ ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತರುವ ಉದ್ದೇಶದಿಂದ ಎನ್ಡಿಎ ಸರ್ಕಾರ ಕ್ಷೇತ್ರ ಮರುವಿಂಗಡಣಾ ಮಸೂದೆಯನ್ನು ಮತ್ತೆ ಮಂಡಿಸುವ ಸಾಧ್ಯತೆಯಿದೆ. ಇದರಿಂದ ಲೋಕಸಭೆಯ ಗರಿಷ್ಠ ಸದಸ್ಯ ಬಲವನ್ನು 850ಕ್ಕೆ ಹೆಚ್ಚಿಸಲು ಅವಕಾಶ ದೊರೆಯಲಿದೆ.
ಇದಕ್ಕೂ ಮೊದಲು, ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನವು ಎಪ್ರಿಲ್ ನಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ವಿರೋಧದಿಂದಾಗಿ ವಿಫಲವಾಗಿತ್ತು.
ಈ ಬಾರಿ ದಕ್ಷಿಣ ರಾಜ್ಯಗಳ ಆತಂಕವನ್ನು ನಿವಾರಿಸಲು ಕೇಂದ್ರ ಸರ್ಕಾರ ಪರಿಷ್ಕೃತ ಸೂತ್ರವೊಂದನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ. ಹೊಸ ಮಸೂದೆಯಲ್ಲಿ ಪ್ರತಿ ರಾಜ್ಯದ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸಿ, ರಾಜ್ಯಗಳ ನಡುವಿನ ಪ್ರಸ್ತುತ ಸ್ಥಾನಗಳ ಪ್ರಮಾಣಾನುಪಾತವನ್ನು ಹಾಗೆಯೇ ಉಳಿಸುವ ಪ್ರಸ್ತಾವ ಇರಬಹುದು. ಇದರಿಂದ ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯನ್ನು ಜನಗಣತಿಯೊಂದಿಗೆ ನೇರವಾಗಿ ಜೋಡಿಸುವುದನ್ನು ತಪ್ಪಿಸಬಹುದು.
ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ನಡೆಸುವುದರಿಂದ ಹೆಚ್ಚಿನ ಜನಸಂಖ್ಯೆ ಹೊಂದಿರುವ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳ ಆಕ್ಷೇಪ. ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣ ರಾಜ್ಯಗಳು ಐತಿಹಾಸಿಕವಾಗಿ ಉತ್ತಮ ಸಾಧನೆ ಮಾಡಿವೆ. ಹೀಗಾಗಿ ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ಮರುಹಂಚಿಕೆ ಮಾಡಿದರೆ ತಮ್ಮ ಸಂಸದೀಯ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂಬ ಆತಂಕ ಅವುಗಳಿಗಿದೆ.
ಎಪ್ರಿಲ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಏಕರೂಪವಾಗಿ ಶೇ. 50ರಷ್ಟು ಹೆಚ್ಚಿಸುವ ಭರವಸೆಯನ್ನು ಮೌಖಿಕವಾಗಿ ನೀಡಿದ್ದರು.
ಈ ಭರವಸೆಯನ್ನು ಹೊಸ ಮಸೂದೆಯಲ್ಲಿ ಸೇರಿಸಲಾಗುತ್ತದೆಯೇ ಎಂಬುದು ನಿರ್ಣಾಯಕವಾಗಲಿದೆ. ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಎನ್ಡಿಎ ಪಡೆಯಲಿದೆಯೇ ಎಂಬುದನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ಇದೂ ಒಂದಾಗಬಹುದು.
ಡಿಎಂಕೆ–ಬಿಜೆಪಿ ನಂಟಿನ ಬಗ್ಗೆ ಟಿವಿಕೆ ಆರೋಪ
ಕ್ಷೇತ್ರ ಮರುವಿಂಗಡಣೆ ವಿಚಾರದ ಹಿನ್ನೆಲೆಯಲ್ಲಿ ಡಿಎಂಕೆ ಬಿಜೆಪಿಯೊಂದಿಗೆ ಕೈಜೋಡಿಸಬಹುದು ಎಂದು ವಿಜಯ್ ನೇತೃತ್ವದ ಟಿವಿಕೆ ಆರೋಪಿಸಿದೆ. ಈ ಆರೋಪದ ಬೆನ್ನಲ್ಲೇ ಸ್ಟಾಲಿನ್ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಟಿವಿಕೆಯ ಐಟಿ ವಿಭಾಗ, ಡಿಎಂಕೆ ತನ್ನ ಸೈದ್ಧಾಂತಿಕ ನಿಲುವನ್ನು ಕೈಬಿಟ್ಟಿದೆ ಎಂದು ಆರೋಪಿಸಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಪ್ರಸಿದ್ಧ ಪ್ರಶ್ನೆಯನ್ನು ಉಲ್ಲೇಖಿಸಿರುವ ಟಿವಿಕೆ, "ಆಡಿಗೆ ಗಡ್ಡವಿದ್ದರೇನು ಪ್ರಯೋಜನ? ದೇಶಕ್ಕೆ ರಾಜ್ಯಪಾಲರಿದ್ದರೇನು ಪ್ರಯೋಜನ?" ಎಂದು ಪ್ರಶ್ನಿಸಿದೆ.
ಗುರುವಾರ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ರಾಜ್ಯಪಾಲರನ್ನು ಭೇಟಿಯಾದ ಬೆನ್ನಲ್ಲೇ ಈ ಪೋಸ್ಟ್ ಪ್ರಕಟವಾಗಿದೆ. ಡಿಎಂಕೆ ಬಿಜೆಪಿಯತ್ತ ಒಲವು ತೋರುತ್ತಿರುವುದಕ್ಕೆ ಇದು ಸೂಚನೆ ಎಂದು ಟಿವಿಕೆ ವ್ಯಾಖ್ಯಾನಿಸಿದೆ.
ಡಿಎಂಕೆಯ ಮುಖವಾಣಿ 'ಮುರಸೊಲಿ'ಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರ ಕುರಿತ ಲೇಖನವೊಂದು ಪ್ರಕಟವಾಗಿರುವುದನ್ನೂ ಟಿವಿಕೆ ಉಲ್ಲೇಖಿಸಿದೆ.
"ಕಲೈಂಜರ್ (ಕರುಣಾನಿಧಿ) ಅವರಿಂದ ಆಶೀರ್ವದಿಸಲ್ಪಟ್ಟ 'ಕಮಲ'ದ ಇತಿಹಾಸ ಮತ್ತೆ ಮರುಕಳಿಸುವಂತಿದೆ. ಸುಮಾರು 14 ವರ್ಷಗಳ ಬಳಿಕ ಉದಯನಿಧಿ ಅವರು ಮುಖ್ಯ ನಿರ್ವಾಹಕರಾಗಿರುವ 'ಮುರಸೊಲಿ'ಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರ ಸಂದರ್ಶನ ಪ್ರಕಟವಾಗಿರುವುದು ಇದಕ್ಕೆ ಸಾಕ್ಷಿ" ಎಂದು ವಿಜಯ್ ಅವರ ಟಿವಿಕೆ ಆರೋಪಿಸಿದೆ.