2026ನೇ ಸಾಲಿನ ವೈದ್ಯಕೀಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ಪ್ರಕಟ : ಪ್ಟೋಜೆನೆಟಿಕ್ಸ್ ಸಂಶೋಧನೆಗಾಗಿ ಡೀಸೆರೋತ್, ಹೆಗೆಮನ್, ನಾಗೆಲ್ಗೆ ಜಂಟಿ ಪ್ರಶಸ್ತಿ
Photo: Nobel Prize
ಸ್ಟಾಕ್‌ಹೋಮ್: ಲೈಟ್-ಗೇಟೆಡ್ ಅಯಾನ್ ಚಾನಲ್ ಗಳು ಮತ್ತು ಆಪ್ಟೋಜೆನೆಟಿಕ್ಸ್ ಗೆ ಸಂಬಂಧಿಸಿದ ಸಂಶೋಧನೆಗಾಗಿ ಕಾರ್ಲ್ ಡೀಸೆರೋತ್, ಪೀಟರ್ ಹೆಗೆಮನ್ ಮತ್ತು ಜಾರ್ಜ್ ನಾಗೆಲ್ ಅವರಿಗೆ 2026ರ ವೈದ್ಯಕೀಯ ನೊಬೆಲ್ ಪ್ರಶಸ್ತಿ ಜಂಟಿಯಾಗಿ ಲಭಿಸಿದೆ.
ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿರುವ ನೊಬೆಲ್ ಅಸೆಂಬ್ಲಿ ಸೋಮವಾರ ಅಕ್ಟೋಬರ್ 5ರಂದು ಈ ಪ್ರಶಸ್ತಿ ಘೋಷಿಸಿತು.
ಮೂವರ ಸಂಶೋಧನೆಯು ಆಪ್ಟೋಜೆನೆಟಿಕ್ಸ್ ಗೆ ಅಡಿಪಾಯ ಹಾಕಿದೆ. ನರಕೋಶಗಳನ್ನು ಬೆಳಕಿನ ಮೂಲಕ ನಿಯಂತ್ರಿಸುವ ಈ ವಿಧಾನದಿಂದ ಮೆದುಳಿನ ನಿರ್ದಿಷ್ಟ ಸರ್ಕ್ಯೂಟ್‌ಗಳು ನೆನಪು, ಭಾವನೆ ಮತ್ತು ನಡವಳಿಕೆಯನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಅಧ್ಯಯನ ಮಾಡಲು ಸಾಧ್ಯವಾಗಿದೆ.
ಪಾಚಿಯಿಂದ ಆರಂಭವಾದ ಸಂಶೋಧನೆ
ಆಪ್ಟೋಜೆನೆಟಿಕ್ಸ್‌ನ ಬೆಳವಣಿಗೆಯಲ್ಲಿ ಕ್ಲಮೈಡೊಮೊನಾಸ್ ಎಂಬ ಏಕಕೋಶೀಯ ಪಾಚಿಯ ಮೇಲಿನ ಪೀಟರ್ ಹೆಗೆಮನ್ ಮತ್ತು ಜಾರ್ಜ್ ನಾಗೆಲ್ ಅವರ ಸಂಶೋಧನೆ ಪ್ರಮುಖ ಹೆಜ್ಜೆಯಾಯಿತು.
ಪಾಚಿಯ ಮೇಲ್ಮೈಯಲ್ಲಿ ಚಾನೆಲ್‌ರೋಡಾಪ್ಸಿನ್ ಎಂಬ ಪ್ರೋಟೀನ್ ಇರುವುದನ್ನು ಅವರು ಪತ್ತೆಹಚ್ಚಿದರು. ಈ ಪ್ರೋಟೀನ್ ಗೆ ನೀಲಿ ಬೆಳಕು ತಾಗಿದಾಗ ಚಾನಲ್ ತೆರೆದುಕೊಳ್ಳುತ್ತದೆ. ಆಗ ವಿದ್ಯುದಾವೇಶ ಹೊಂದಿರುವ ಕಣಗಳು ಚಾನಲ್ ಮೂಲಕ ಹರಿಯಲು ಅವಕಾಶ ದೊರೆಯುತ್ತದೆ. ಇದರಿಂದ ವಿದ್ಯುತ್ ಸಂಕೇತ ಉಂಟಾಗುತ್ತದೆ.
ಬಳಿಕ ಕಾರ್ಲ್ ಡೀಸೆರೋತ್ ಅವರು ಚಾನೆಲ್‌ರೋಡಾಪ್ಸಿನ್ ಗೆ ಸಂಬಂಧಿಸಿದ ಜೀನ್ ಅನ್ನು ಇಲಿ ನರಕೋಶಗಳಲ್ಲಿ ಪರಿಚಯಿಸಿದರು. ನರಕೋಶಗಳ ಮೇಲೆ ನೀಲಿ ಬೆಳಕು ಬೀರುವ ಮೂಲಕ ನರ ಸಂಕೇತವನ್ನು ಪ್ರಚೋದಿಸಲು ಅವರಿಗೆ ಸಾಧ್ಯವಾಯಿತು.
ಡೀಸೆರೋತ್ ಅವರು ಈ ಪ್ರಗತಿಯ ಕುರಿತ ಸಂಶೋಧನೆಯನ್ನು 2005ರಲ್ಲಿ ಪ್ರಕಟಿಸಿದರು. ಎರಡು ವರ್ಷಗಳ ಬಳಿಕ, 2007ರಲ್ಲಿ, ಬೆಳಕಿನ ಮೂಲಕ ನಿಯಂತ್ರಿಸಬಹುದಾದ ಈ ಸ್ವಿಚ್ ಜೀವಂತ ಇಲಿಗಳ ಮೆದುಳಿನಲ್ಲಿಯೂ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅವರು ಪ್ರದರ್ಶಿಸಿದರು.
ಈ ಸಂಶೋಧನೆಗಳ ಮೂಲಕ ಬೆಳಕನ್ನು ಬಳಸಿಕೊಂಡು ನಿರ್ದಿಷ್ಟ ನರಕೋಶಗಳನ್ನು ನಿಯಂತ್ರಿಸುವ ಹೊಸ ವಿಧಾನಕ್ಕೆ ದಾರಿ ತೆರೆದಿದ್ದು, ಮೆದುಳಿನ ಸರ್ಕ್ಯೂಟ್‌ಗಳು ನೆನಪು, ಭಾವನೆ ಮತ್ತು ನಡವಳಿಕೆಯನ್ನು ರೂಪಿಸುವ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಮಹತ್ವದ ಸಾಧನವಾಗಿ ಆಪ್ಟೋಜೆನೆಟಿಕ್ಸ್ ಬೆಳೆದಿದೆ.