ಸುಪ್ರೀಂ ಕೋರ್ಟ್‌ | Photo Credit : PTI 

ಹೊಸದಿಲ್ಲಿ:  ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ಅಧಿಕಾರ ಚಲಾಯಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಭಾರತೀಯ ಚುನಾವಣಾ ಆಯೋಗಕ್ಕೆ (ECI) ಸೋಮವಾರ ನೋಟಿಸ್ ಜಾರಿ ಮಾಡಿದೆ.

ಚುನಾವಣಾ ಆಯೋಗ ಕೈಗೊಂಡಿರುವ ನಿರ್ಧಾರಗಳು ಒಮ್ಮತ ಅಥವಾ ಬಹುಮತದ ಶಾಸನಬದ್ಧ ಅಗತ್ಯಗಳಿಗೆ ಅನುಗುಣವಾಗಿದ್ದವೇ ಎಂಬುದನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

SIR (ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ)ಗೆ ಸಂಬಂಧಿಸಿದ ಹಲವು ನಿರ್ಧಾರಗಳನ್ನು ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ ಎಂಬ ಆರೋಪಗಳ ಕುರಿತು ಮೊದಲು ಚುನಾವಣಾ ಆಯೋಗ ಹಾಗೂ ಇತರ ಪ್ರತಿವಾದಿಗಳ ಪ್ರತಿಕ್ರಿಯೆ ಪಡೆಯಬೇಕಾಗಿದೆ ಎಂದು ನ್ಯಾಯಪೀಠ ಹೇಳಿತು.

ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಮೇರೆಗೆ ಏಕಪಕ್ಷೀಯ ಮಧ್ಯಂತರ ಆದೇಶ ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಅರ್ಜಿಯಲ್ಲಿರುವ ಆರೋಪಗಳ ಕುರಿತು ಪ್ರತಿವಾದಿಗಳ ಪ್ರತಿಕ್ರಿಯೆ ಪಡೆದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿತು.

ಚುನಾವಣಾ ಆಯೋಗ ಕೈಗೊಂಡಿರುವ ನಿರ್ಧಾರಗಳು ಒಮ್ಮತ ಅಥವಾ ಬಹುಮತದ ಶಾಸನಬದ್ಧ ಅಗತ್ಯಗಳಿಗೆ ಅನುಗುಣವಾಗಿದ್ದವೇ ಎಂಬುದನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ‘ಚುನಾವಣಾ ಆಯೋಗವು ಕಾನೂನಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷಿಸುತ್ತೇವೆ’ ಎಂದು ನ್ಯಾಯಪೀಠ ಹೇಳಿತು.

ನಿರ್ಧಾರ ಕೈಗೊಂಡಿದ್ದು ಹೇಗೆ?

ಅರ್ಜಿಯಲ್ಲಿ ಪ್ರಶ್ನಿಸಲಾಗಿರುವ ನಿರ್ಧಾರಗಳಿಗೆ ಸಂಬಂಧಿಸಿದ ವಿವರಗಳನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತು.

ಆ ನಿರ್ಧಾರಗಳನ್ನು ಸರ್ವಾನುಮತದಿಂದ, ಬಹುಮತದ ಆಧಾರದ ಮೇಲೆ ಅಥವಾ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ಕೈಗೊಂಡಿದ್ದರೇ ಎಂಬುದನ್ನು ಸ್ಪಷ್ಟಪಡಿಸುವಂತೆಯೂ ನ್ಯಾಯಪೀಠ ಸೂಚಿಸಿತು.

ಪ್ರಶ್ನಾರ್ಹ ನಿರ್ಧಾರಗಳನ್ನು ಕೈಗೊಳ್ಳುವಾಗ ಚುನಾವಣಾ ಆಯೋಗ ಅನುಸರಿಸಿದ ಪ್ರಕ್ರಿಯೆ ಯಾವುದು, ಅವು ಒಮ್ಮತ ಅಥವಾ ಬಹುಮತದ ಶಾಸನಬದ್ಧ ಅಗತ್ಯಗಳಿಗೆ ಅನುಗುಣವಾಗಿದ್ದವೆಯೇ ಎಂಬುದಕ್ಕೆ ಸಂಬಂಧಿಸಿದ ವಿವರಗಳನ್ನೂ ದಾಖಲೆಯಲ್ಲಿ ಮಂಡಿಸುವಂತೆ ನ್ಯಾಯಪೀಠ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor