ನೊಯ್ಡಾ ವಿಮಾನ ನಿಲ್ದಾಣಕ್ಕೆ ಮೋದಿ ಹೆಸರು ಮರುನಾಮಕರಣಕ್ಕೆ ಉತ್ತರ ಪ್ರದೇಶ ಸಚಿವ ಸಂಪುಟ ಒಪ್ಪಿಗೆ
ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Photo: PTI)
ಲಕ್ನೋ: ಉತ್ತರ ಪ್ರದೇಶದ ಜೆವಾರ್ ನಲ್ಲಿರುವ ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ ಸಲ್ಲಿಸಿರುವ 25 ವರ್ಷಗಳ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ 39 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದ ಬಳಿಕ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಶುಕ್ರವಾರ ಈ ವಿಷಯ ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ದೇಶದ ಮತ್ತು ಉತ್ತರ ಪ್ರದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.
‘ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವ ನಿರ್ಧಾರ ರಾಜ್ಯ ಸಚಿವ ಸಂಪುಟಕ್ಕೆ ಹೆಮ್ಮೆಯ ವಿಷಯ’ ಎಂದು ತಿಳಿಸಿದರು.
ಮೋದಿ ಅವರು ಉತ್ತರ ಪ್ರದೇಶದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ರಾಜ್ಯವು ತ್ವರಿತ ಪ್ರಗತಿ ಸಾಧಿಸಿದೆ ಎಂದರು.
ಪ್ರಧಾನಿ ಮೋದಿ ಅವರು ಸೇವೆ, ಬದ್ಧತೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ಬಲಗೊಂಡಿದೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಕಾರಿಡಾರ್ ಅಭಿವೃದ್ಧಿ ಮತ್ತು ವಿದೇಶದಿಂದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಭಾರತಕ್ಕೆ ಮರಳಿ ತಂದಿರುವುದನ್ನು ಮೋದಿ ಅವರ ನಾಯಕತ್ವದ ಪ್ರಮುಖ ಸಾಧನೆಗಳೆಂದು ಆದಿತ್ಯನಾಥ್ ಉಲ್ಲೇಖಿಸಿದರು.
2017ರಿಂದ ಉತ್ತರ ಪ್ರದೇಶದಲ್ಲಿ ಎಕ್ಸ್ ಪ್ರೆಸ್ ವೇ ಗಳು, ಹೆದ್ದಾರಿಗಳು, ಮೆಟ್ರೊ ಸೇವೆಗಳು ಮತ್ತು ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ (RRTS) ವಿಸ್ತರಣೆಯ ಮೂಲಕ ಮೂಲಸೌಕರ್ಯ ಅಭಿವೃದ್ಧಿಯಾಗಿದೆ ಎಂದರು.
ವರ್ಷಕ್ಕೆ 1.2 ಕೋಟಿ ಪ್ರಯಾಣಿಕರ ನಿರ್ವಹಣೆ
ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉತ್ತರ ಪ್ರದೇಶಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯ ಸಚಿವ ಸಂಪುಟವು ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದೆ ಎಂದು ಆದಿತ್ಯನಾಥ್ ಹೇಳಿದರು.
‘ಈ ವಿಮಾನ ನಿಲ್ದಾಣ ಉತ್ತರ ಪ್ರದೇಶದ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಭವಿಷ್ಯದಲ್ಲಿ ದೇಶದ ಅತಿದೊಡ್ಡ ವಾಯುಯಾನ ಕೇಂದ್ರವಾಗುವ ನಿರೀಕ್ಷೆಯಿದೆ. ಹೀಗಾಗಿ, ಇದಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜೆವಾರ್, ನೊಯ್ಡಾ” ಎಂದು ಹೆಸರಿಡುವ ನಿರ್ಣಯವನ್ನು ಸಚಿವ ಸಂಪುಟ ಅಂಗೀಕರಿಸಿದೆ’ ಎಂದು ತಿಳಿಸಿದರು.
ಜೆವಾರ್ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶದಲ್ಲಿ ವಿಮಾನ ಸಂಪರ್ಕ ಸುಧಾರಿಸುವುದರ ಜತೆಗೆ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಅವರು ಮಾರ್ಚ್ ನಲ್ಲಿ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಿದ್ದರು.
ಪ್ರಸ್ತುತ ವಿಮಾನ ನಿಲ್ದಾಣವು ವರ್ಷಕ್ಕೆ ಸುಮಾರು 1.2 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಯೋಜನೆಯ ನಾಲ್ಕೂ ಹಂತಗಳು ಪೂರ್ಣಗೊಂಡ ಬಳಿಕ ಇದು ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.
ಸಚಿವ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಸೇರಿದಂತೆ ಮಿತ್ರಪಕ್ಷಗಳ ನಾಯಕರು ಭಾಗವಹಿಸಿದ್ದರು.