ಅಮೆರಿಕದಲ್ಲಿ 15,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತೇವೆ: ನೂತನ ಗ್ರೀನ್ ಕಾರ್ಡ್ ನಿರ್ಬಂಧ ಯಾವುದೇ ಪರಿಣಾಮ ಬೀರುವುದಿಲ್ಲ; TCS
ಸಾಂದರ್ಭಿಕ ಚಿತ್ರ (Photo: AI Generated)
ಹೊಸ ದಿಲ್ಲಿ: ಗ್ರೀನ್ ಕಾರ್ಡ್ ಭರ್ತಿಗೆ ತಮ್ಮ ಸಂಸ್ಥೆಯ ಮೇಲೆ ಹೇರಿರುವ ನಿರ್ಬಂಧದ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ನಾವು ಅಮೆರಿಕದಲ್ಲಿ 15,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತೇವೆ ಹಾಗೂ ನೂತನ ಗ್ರೀನ್ ಕಾರ್ಡ್ ನಿಯಮಗಳಿಂದ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ವೀಸಾ ಮೇಲಿನ ನಿರ್ಬಂಧಗಳನ್ನು ತೀವ್ರಗೊಳಿಸಿರುವ ಡೊನಾಲ್ಡ್ ಟ್ರಂಪ್ ಸರಕಾರದ ನಿರ್ಧಾರದಿಂದ ತೊಂದರೆಗೀಡಾಗಿರುವ ಎಂಟು ಸಂಸ್ಥೆಗಳ ಪೈಕಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕೂಡಾ ಸೇರಿದೆ. ವಂಚನೆ ಹಾಗೂ ಅಮೆರಿಕನ್ನರು ಉದ್ಯೋಗ ನಷ್ಟ ಅನುಭವಿಸುತ್ತಿರುವುದನ್ನು ಗುರಿಯಾಗಿಸಿಕೊಂಡು ಈ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಸರಕಾರ ಹೇಳಿಕೊಂಡಿದೆ. ಈ ನಡೆಯಿಂದ ತೊಂದರೆಗೀಡಾಗಿರುವ ಸಂಸ್ಥೆಗಳ ಪೈಕಿ ಇನ್ಫೋಸಿಸ್ ಕೂಡಾ ಸೇರಿದೆ.
ಖಾಯಂ ಕಾರ್ಮಿಕರ ಪ್ರಮಾಣೀಕರಣ ಕಾರ್ಯಕ್ರಮದಿಂದ ತಮ್ಮ ಸಂಸ್ಥೆಯನ್ನು ಅಮಾನತುಗೊಳಿಸಿರುವುದರಿಂದ ಅಮೆರಿಕದಲ್ಲಿನ ನಮ್ಮ ಸಿಬ್ಬಂದಿಗಳ ಸಾಮರ್ಥ್ಯ ಕಾರ್ಯತಂತ್ರ ಹಾಗೂ ಗ್ರಾಹಕರೊಂದಿಗಿನ ವ್ಯವಹಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವಿಶ್ವಾಸ ವ್ಯಕ್ತಪಡಿಸಿದೆ.
PERM ಎಂದೂ ಕರೆಯಲಾಗುವ ಅಮೆರಿಕ ಕಾರ್ಮಿಕ ಇಲಾಖೆಯ ಖಾಯಂ ಕಾರ್ಮಿಕರ ಪ್ರಮಾಣೀಕರಣ ಪ್ರಕ್ರಿಯೆಯು ಬಹುತೇಕ ಉದ್ಯೋಗಾಧಾರಿತ ಗ್ರೀನ್ ಕಾರ್ಡ್ ಗೆ ಅಗತ್ಯವಿದೆ. ಈ ಕಾರ್ಯಕ್ರಮದಡಿ, ವಿದೇಶಿ ಉದ್ಯೋಗಿಯನ್ನು ನೇಮಿಸಿಕೊಳ್ಳುವುದರಿಂದ, ವೇತನ, ಉದ್ಯೋಗ ಸ್ಥಳದಲ್ಲಿನ ಪರಿಸ್ಥಿತಿ ಅಥವಾ ಅಮೆರಿಕ ಕಾರ್ಮಿಕರ ಉದ್ಯೋಗಾವಕಾಶಕ್ಕೆ ಹಾನಿಯಾಗುವುದಿಲ್ಲ ಎಂದು ಉದ್ಯೋಗದಾತರು ದೃಢಪಡಿಸಲೇಬೇಕಿದೆ.