ಖತರ್ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ : ಭಾರತದಲ್ಲಿ ಒಂದು ದಿನ ಶೋಕಾಚರಣೆ
Photo |Amiri Diwan
ಹೊಸದಿಲ್ಲಿ: ಖತರ್ ನ ಮಾಜಿ ಅಮೀರ್ ಶೇಖ್ ಹಮದ್ ಅಲ್ ಥಾನಿ ರವಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರ ಗೌರವಾರ್ಥ ಸೋಮವಾರ ಭಾರತ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ.
ಸೋಮವಾರ ಭಾರತದಾದ್ಯಂತ ಸರಕಾರಿ ಕಚೇರಿಗಳ ಮೇಲೆ ನಿಯಮಿತವಾಗಿ ಹಾರಿಸಲಾಗುವ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು ಹಾಗೂ ಸೋಮವಾರದಂದು ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳಿರುವುದಿಲ್ಲ ಎಂದು ರವಿವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.
ಶೇಖ್ ಹಮದ್ ಅಲ್ ಥಾನಿ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, “ಶೇಖ್ ಹಮದ್ ಅಲ್ ಥಾನಿ ದಾರ್ಶನಿಕ ನಾಯಕರಾಗಿದ್ದು, ಅವರು ಖತರ್ ಅನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು” ಎಂದು ಬಣ್ಣಿಸಿದ್ದಾರೆ.
“ನಾವು ಅವರನ್ನು ನೈಜ ಸ್ನೇಹಿತನನ್ನಾಗಿಯೂ ಸ್ಮರಿಸುತ್ತಿದ್ದು, ಫೆಬ್ರವರಿ 2024ರಲ್ಲಿ ನಾನು ಕೊನೆಯದಾಗಿ ಖತರ್ ಗೆ ಭೇಟಿ ನೀಡಿದಾಗ, ಅವರನ್ನು ಭೇಟಿ ಮಾಡಿದ ಸೌಭಾಗ್ಯ ನನ್ನದಾಗಿತ್ತು” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.