×
Ad

ಮೂವರಲ್ಲಿ ಒಬ್ಬರು ನಕಲಿ ವಕೀಲ: ರಾಷ್ಟ್ರೀಯ ಡಿಜಿಟಲ್ ರಿಜಿಸ್ಟ್ರಿಗೆ ಚಿಂತನೆ

Update: 2026-06-19 07:11 IST

ಸುಪ್ರೀಂ ಕೋರ್ಟ್ Photo:  PTI

ಹೊಸದಿಲ್ಲಿ: ದೇಶದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಪ್ರತಿ ಮೂವರು ವಕೀಲರ ಪೈಕಿ ಒಬ್ಬರು ನಕಲಿ ವಕೀಲರಾಗಿದ್ದು, ಈ ದಂಧೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಧಾರ್ ಮಾದರಿಯಲ್ಲಿ ವಕೀಲರಿಗೆ ರಾಷ್ಟ್ರೀಯ ಡಿಜಿಟಲ್ ರಿಜಿಸ್ಟ್ರಿ ಆರಂಭಿಸಬೇಕು ಎಂಬ ಭಾರತದ ವಕೀಲರ ಸಂಘದ ಮನವಿಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.

ದೇಶದ ಕೋರ್ಟ್‌ಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಶೇಕಡ 35-40ರಷ್ಟು ವಕೀಲರು ನೈಜ ಪದವಿಗಳನ್ನು ಹೊಂದಿಲ್ಲ ಎಂದು ಭಾರತದ ವಕೀಲರ ಸಂಘದ ಅಧ್ಯಕ್ಷರು ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ವಕೀಲರ ಸಂಘದ ಪರ ವಕೀಲ ಪ್ರಶಾಂತ್ ಕುಮಾರ್ ಹಾಗೂ ವಿಪಿನ್ ನಾಯರ್, "ಕಾನೂನು ವೃತ್ತಿಯ ನ್ಯಾಯಾಂಗ ಸ್ವಾತಂತ್ರ್ಯ ಅಪಾಯದಲ್ಲಿದೆ" ಎಂದು ಪ್ರತಿಪಾದಿಸಿದರು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರಿದ್ದ ಪೀಠದ ಮುಂದೆ ವಾದ ಮಂಡಿಸಿದ ವಕೀಲರು, ನಕಲಿ ವಕೀಲರ ದಂಧೆಗೆ ಕಡಿವಾಣ ಹಾಕುವ ಸಲುವಾಗಿ ಬಿಸಿಐ ನಡೆಸುತ್ತಿರುವ ದೃಢೀಕರಣ ಅಭಿಯಾನ ಒಂದು ತಾತ್ಕಾಲಿಕ ವ್ಯವಸ್ಥೆ. ಆದ್ದರಿಂದ ಕಾನೂನು ವೃತ್ತಿಗಾಗಿ ರಾಷ್ಟ್ರೀಯ ಡಿಜಿಟಲ್ ರಿಜಿಸ್ಟ್ರಿಯಂಥ ಕಾಯಂ ತಂತ್ರಜ್ಞಾನ ಚಾಲಿತ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ಮಾಡಿದರು.

ತಂತ್ರಜ್ಞಾನವನ್ನು ಬಳಸಿಕೊಂಡು ಜಾರಿಗೊಳಿಸಬಹುದಾದ ಈ ವ್ಯವಸ್ಥೆ ಒಂದು ವಿನೂತನ ಕ್ರಮ. ಆದರೆ ಈ ಪ್ರಕ್ರಿಯೆಯಲ್ಲಿ ಕಾನೂನು ಪದವಿ ನೀಡುತ್ತಿರುವ ವಿಶ್ವವಿದ್ಯಾನಿಲಯಗಳನ್ನು ಕೂಡ ಸೇರಿಸಿಕೊಳ್ಳಬೇಕಾಗುತ್ತದೆ. ಕೋರ್ಟ್‌ಗಳಲ್ಲಿ ಪ್ರಾಕ್ಟೀಸ್ ಮಾಡಲು ಅಗತ್ಯ ಅರ್ಹತೆಯನ್ನು ಹೊಂದಿದ ನೈಜ ಪದವೀಧರರ ಪಟ್ಟಿಗಳನ್ನು ಬಹಿರಂಗಪಡಿಸಲು ಸೂಚಿಸಬೇಕಾಗುತ್ತದೆ ಎಂದು ಸಿಜೆಐ ಸಲಹೆ ಮಾಡಿದರು.

ಈ ಹಿನ್ನೆಲೆಯಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಕೇಂದ್ರ ಸರ್ಕಾರ, ಬಿಸಿಐ, ಯುಜಿಸಿ ಮತ್ತು ರಾಜ್ಯಗಳ ವಕೀಲರ ಮಂಡಳಿಗಳ ಅಭಿಪ್ರಾಯವನ್ನು ಕೋರ್ಟ್ ಕೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News