ಅಂತಿಮ ಹಂತದಲ್ಲಿ ‘ಆಪರೇಷನ್ ಟೈಗರ್’: ಉದ್ಧವ್ ಬಣದ 7 ಸಂಸದರು ಶಿಂಧೆ ಬಣಕ್ಕೆ ಪಕ್ಷಾಂತರ ಸಾಧ್ಯತೆ
ಟಿಎಂಸಿ ಬಂಡಾಯದ ಬಳಿಕ ವಿಪಕ್ಷಗಳಿಗೆ ಮತ್ತೊಂದು ಹಿನ್ನಡೆ
ಉದ್ಧವ್ ಠಾಕ್ರೆ - ಏಕನಾಥ್ ಶಿಂಧೆ | Photos: PTI
ಹೊಸ ದಿಲ್ಲಿ: ಟಿಎಂಸಿ ಸಂಸದರ ಬಂಡಾಯದ ಬಳಿಕ ವಿಪಕ್ಷಗಳಿಗೆ ಮತ್ತೊಂದು ಹಿನ್ನಡೆಯಾಗಿದ್ದು, ಶಿವಸೇನೆ (ಉದ್ಧವ್ ಬಣ)ಯ ಏಳು ಸಂಸದರು ಶಿವಸೇನೆ(ಶಿಂಧೆ ಬಣ)ಕ್ಕೆ ಪಕ್ಷಾಂತರಗೊಳ್ಳುವ ಸಾಧ್ಯತೆ ಇದೆ. ‘ಆಪರೇಷನ್ ಟೈಗರ್’ ಅಂತಿಮ ಹಂತಕ್ಕೆ ತಲುಪಿದೆ ಎಂದು ಶಿವಸೇನೆ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಕೃಪಾಲ್ ತುರ್ಮಾನೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮುಂಬರುವ ಲೋಕಸಭಾ ಮಳೆಗಾಲದ ಅಧಿವೇಶನಕ್ಕೂ ಮುನ್ನ ಶಿವಸೇನೆ(ಉದ್ಧವ್ ಬಣ)ಯ ಏಳು ಸಂಸದರು ಶಿವಸೇನೆ(ಶಿಂಧೆ ಬಣ)ಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಕೃಪಾಲ್ ತುರ್ಮಾನೆ ಹೇಳಿದ್ದಾರೆ. ಹಾಗೇನಾದರೂ ಆದರೆ, ಲೋಕಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲ ಮತ್ತಷ್ಟು ವೃದ್ಧಿಯಾಗಲಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿರುವ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
“ಶಿವಸೇನೆ (ಉದ್ಧವ್ ಬಣ)ಯ ಏಳು ಸಂಸದರು ನಮ್ಮೊಂದಿಗೆ ಸೇರ್ಪಡೆಯಾಗಿ, ಏಕನಾಥ್ ಶಿಂಧೆ ನಾಯಕತ್ವದಲ್ಲಿ ಕೆಲಸ ಮಾಡಲು ಬಯಸುತ್ತಿದ್ದಾರೆ. ಅವರ 16 ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ” ಎಂದು ಅವರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“’ಆಪರೇಷನ್ ಟೈಗರ್’ ಅಡಿ ಶಿವಸೇನೆ(ಉದ್ಧವ್ ಬಣ)ಯ ಏಳು ಸಂಸದರೊಂದಿಗೆ ನಡೆದ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ” ಎಂದು ಅವರು ಹೇಳಿದ್ದಾರೆ. ಈ ಬೆಳವಣಿಗೆ ಲೋಕಸಭಾ ಮಳೆಗಾಲದ ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನವೇ ನಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮತ್ತಷ್ಟು ವಿವರಗಳನ್ನು ನೀಡಲು ನಿರಾಕರಿಸಿದ ಕೃಪಾಲ್ ತುರ್ಮಾನೆ, ಏಳು ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.