×
Ad

ಯುಎಸ್-ಇರಾನ್ ಒಪ್ಪಂದಿಂದ ಶಾಂತಿ, ಸ್ಥಿರತೆ ಪುನಃಸ್ಥಾಪನೆಯಾಗುತ್ತದೆ : ಪ್ರಧಾನಿ ನರೇಂದ್ರ ಮೋದಿ

Update: 2026-06-16 20:07 IST

Photo Credit: ANI

ಹೊಸದಿಲ್ಲಿ,ಜೂ.16: ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿರುವ ಒಪ್ಪಂದವನ್ನು ಸ್ವಾಗತಿಸಿದ್ದಾರೆ.

ಯುಎಸ್-ಇರಾನ್ ಒಪ್ಪಂದ ಪ್ರಕಟವಾದ ನಂತರ ತನ್ನ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಪ್ರಧಾನಿ ಮೋದಿ,‘ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟ ಒಡಂಬಡಿಕೆಯನ್ನು ನಾನು ಸ್ವಾಗತಿಸುತ್ತೇನೆ. ಈ ಸಂಘರ್ಷವು ಪ್ರಪಂಚದಾದ್ಯಂತ ಗಂಭೀರ ಆರ್ಥಿಕ ವ್ಯತ್ಯಯವನ್ನುಂಟು ಮಾಡಿದೆ ಮತ್ತು ಹಲವು ದೇಶಗಳಲ್ಲಿ ಪ್ರಾಣಹಾನಿಗೆ ಕಾರಣವಾಗಿದೆ’ ಎಂದು ಹೇಳಿದ್ದಾರೆ.

ಮೋದಿ ಅವರು ತನ್ನ ಯುರೋಪ್ ಪ್ರವಾಸದ ಭಾಗವಾಗಿ ಒಂದು ದಿನದ ಭೇಟಿಗಾಗಿ ಸ್ಲೋವಾಕಿಯಾದ ರಾಜಧಾನಿ ಬ್ರಾಟಿಸ್ಲಾವಾದಲ್ಲಿದ್ದಾರೆ.

‘ಈ ಒಡಂಬಡಿಕೆಯ ಅನುಷ್ಠಾನವು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ಹಾಗೂ ನೌಕಾಯಾನ ಮತ್ತು ವಾಣಿಜ್ಯದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಭಾರತ ಆಶಿಸುತ್ತದೆ. ಉಳಿದಿರುವ ವಿಷಯಗಳ ಕುರಿತು ಚರ್ಚೆಗಳು ನಡೆದು ಸುಸ್ಥಿರ ಅಂತಿಮ ಒಪ್ಪಂದವನ್ನು ತಲುಪುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದೂ ಮೋದಿ ಹೇಳಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಕಳೆದ ಮೂರೂವರೆ ತಿಂಗಳಿನಿಂದ ನಡೆಯುತ್ತಿರುವ ಯುದ್ಧದ ದಾಳಿಗಳಲ್ಲಿ ನಾವಿಕರು ಸೇರಿದಂತೆ ಕನಿಷ್ಠ 13 ಭಾರತೀಯರು ಕೊಲ್ಲಲ್ಪಟ್ಟಿದ್ದಾರೆ. ತೀರಾ ಇತ್ತೀಚಿನ ಘಟನೆ ಜೂನ್ 10 ರಂದು ನಡೆದಿದ್ದು,ವಾಣಿಜ್ಯ ಹಡಗಿನ ಮೇಲೆ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News