×
Ad

ಆಪರೇಷನ್ ಟೈಗರ್ ವದಂತಿ | ದಿಲ್ಲಿಯಲ್ಲಿ ಇಂದು ಉದ್ಧವ್ ನೇತೃತ್ವದ ಶಿವಸೇನೆ ಸಭೆ : ಕಡ್ಡಾಯವಾಗಿ ಹಾಜರಾಗುವಂತೆ ಪಕ್ಷದ ಸಂಸದರಿಗೆ ಸೂಚನೆ

Update: 2026-06-18 10:23 IST

Photo | indiatoday

ಹೊಸದಿಲ್ಲಿ: ಸಂಸದರ ಬಂಡಾಯ, ಆಪರೇಷನ್ ಟೈಗರ್ ವದಂತಿ ಕುರಿತ ಊಹಾಪೋಹಗಳ ಮಧ್ಯೆ ಉದ್ಧವ್ ಠಾಕ್ರೆ ಅವರು ದಿಲ್ಲಿಯಲ್ಲಿ  ಶಿವಸೇನೆ ಸಂಸದರ ನಿರ್ಣಾಯಕ ಸಭೆಯನ್ನು ಕರೆದಿದ್ದು, ಸಭೆಗೆ ಕಡ್ಡಾಯವಾಗಿ ಹಾಜರಿರುವಂತೆ ಪಕ್ಷದ ಎಲ್ಲಾ ಸಂಸದರಿಗೆ ಸೂಚಿಸಿದ್ದಾರೆ. 

ಬಂಡಾಯ ಗುಂಪು, ಉದ್ಧವ್ ನೇತೃತ್ವದ ಶಿವಸೇನೆಯ 9 ಸಂಸದರ ಪೈಕಿ 6 ಮಂದಿಯ ಬೆಂಬಲವನ್ನು ಪಡೆದುಕೊಂಡಿದೆ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದಾರೆ ಎಂಬ ವರದಿಯು ಮಹಾರಾಷ್ಟ್ರದಲ್ಲಿ ಹೊಸ ರಾಜಕೀಯ ಸಂಚಲನವನ್ನು ಸೃಷ್ಟಿಸಿದೆ.

ವರದಿಯ ಪ್ರಕಾರ, ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ ಮತ್ತು ಸಂಜಯ್ ಜಾಧವ್ ಅವರು ಬಂಡಾಯ ಬಣದ ಸಂಸದರು.

2022ರಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯದಿಂದ ಪಕ್ಷಕ್ಕೆ ಉಂಟಾದ ಹಿನ್ನಡೆ ಮರುಕಳಿಸದಂತೆ ತಪ್ಪಿಸಲು, ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಗುರುವಾರ ಬೆಳಿಗ್ಗೆ 11 ಗಂಟೆಗೆ ದಿಲ್ಲಿಯಲ್ಲಿ ಎಲ್ಲಾ 9 ಸಂಸದರನ್ನು ಸಭೆಗೆ ಹಾಜರಾಗುವಂತೆ ವಿಪ್ ಜಾರಿ ಮಾಡಿದೆ.

ಸಭೆಗೆ ಗೈರುಹಾಜರಾಗುವ ಸಂಸದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಈ ಮಹತ್ವದ ಸಭೆಯಲ್ಲಿ ಉದ್ಧವ್ ಠಾಕ್ರೆ ತಮ್ಮ ಸಂಸದೀಯ ಪಕ್ಷದ ಮೇಲಿನ ನಿಯಂತ್ರಣವನ್ನು ಉಳಿಸಿಕೊಳ್ಳುತ್ತಾರ ಅಥವಾ 2022ರ ಬಂಡಾಯದ ನಂತರ ಮತ್ತೊಮ್ಮೆ ಪಕ್ಷ ವಿಭಜನೆಯ ಸಂಕಷ್ಟವನ್ನು ಎದುರಿಸಬೇಕಾಗುತ್ತದೆಯೇ ಎಂಬುದು ಸ್ಪಷ್ಟವಾಗುವ ನಿರೀಕ್ಷೆಯಿದೆ.

ಮೂಲಗಳ ಪ್ರಕಾರ, ಬಂಡಾಯ ಗುಂಪು ಶಿವಸೇನೆ (ಯುಬಿಟಿ)ಯ 9 ಸಂಸದರಲ್ಲಿ ಆರು ಮಂದಿಯ ಬೆಂಬಲವಿದೆ ಎಂದು ಹೇಳಿಕೊಂಡಿದೆ. ಇದರಿಂದ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಅಗತ್ಯವಿರುವ 2/3 ಸಂಖ್ಯಾಬಲ ಇದಾಗಿರುವುದರಿಂದ, ಈ ಬೆಳವಣಿಗೆಗೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News