Screengrab: X/@aditytiwarilive

ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನವೊಂದು ಗುರುವಾರ ಬೆಳಗ್ಗೆ ಪತನಗೊಂಡಿದ್ದು, ಪೈಲಟ್ ಮತ್ತು ಸಹ-ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನ್ಪುರದ ಕತ್ರಿ ಪ್ರದೇಶದ ನತ್ತುಪೂರ್ವ ಗ್ರಾಮದ ಗಂಗಾ ಅಣೆಕಟ್ಟು ಸಮೀಪ ಅಪಘಾತ ನಡೆದಿದೆ. ಮೃತರನ್ನು ತರಬೇತಿದಾರ ಪೈಲಟ್, ಗುಜರಾತ್ ನಿವಾಸಿ ಸಚಿನ್ ಭಾಟಿಯ ಮತ್ತು ತರಬೇತಿ ಪಡೆಯುವ ಪೈಲಟ್, ಕರ್ನಾಟಕದ ಅಭಿಷೇಕ್ ಪೂಜಾರಿ ಎಂಬುದಾಗಿ ಗುರುತಿಸಲಾಗಿದೆ ಎಂದು ಪೊಲೀಸ್ ಕಮಿಶನರ್ ರಘುಬೀರ್ ಲಾಲ್ ತಿಳಿಸಿದರು.

ವಿಮಾನವು ಬೆಳಗ್ಗೆ 11:30ರ ಸುಮಾರಿಗೆ ತರಬೇತಿ ಕೇಂದ್ರದಿಂದ ಹಾರಾಟ ಆರಂಭಿಸಿತು ಹಾಗೂ 20 ನಿಮಿಷಗಳ ಬಳಿಕ ಹಾರಾಟ ಮುಗಿಸಿ ವಾಪಸಾಗುತ್ತಿದ್ದಾಗ ಪತನಗೊಂಡಿತು.

ಅವಳಿ ಇಂಜಿನ್‌ಗಳ ಟೆಕ್ನಮ್ ವಿಮಾನವನ್ನು 2023ರಲ್ಲಿ ತರಬೇತಿ ಕೇಂದ್ರಕ್ಕೆ ತರಲಾಗಿತ್ತು. ಭಾಟಿಯ ಸುಮಾರು 3,000 ಗಂಟೆಗಳ ಹಾರಾಟ ಅನುಭವ ಹೊಂದಿದ್ದರು ಎಂದು ಲಾಲ್ ಹೇಳಿದರು.

ವಿಮಾನವು ಹೊಲವೊಂದಕ್ಕೆ ಅಪ್ಪಳಿಸಿತು. ಆಗ ದೊಡ್ಡ ಸದ್ದು ಕೇಳಿಸಿದ್ದು ಇಡೀ ಪ್ರದೇಶ ತತ್ತರಿಸಿತು ಎಂದು ಸ್ಥಳೀಯರು ತಿಳಿಸಿದರು. ವಿಮಾನದ ಅವಶೇಷಗಳು ಹೊಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor