“ದಯವಿಟ್ಟು ಜ್ಞಾನೇಶ್ ಕುಮಾರ್ ಅವರನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ” : ಭಾರತದ ಚುನಾವಣಾ ವ್ಯವಸ್ಥೆಯನ್ನು ಟ್ರಂಪ್ ಶ್ಲಾಘಿಸಿದ ಬೆನ್ನಲ್ಲೆ ಕಾಂಗ್ರೆಸ್ ವ್ಯಂಗ್ಯ
ಲಭ್ಯವಿರುವ ಮುಂದಿನ ವಿಮಾನದಲ್ಲಿ ನಾವು ನಮ್ಮ ಇವಿಎಂಗಳನ್ನು ಕೂಡ ಕಳುಹಿಸುತ್ತೇವೆ ಎಂದ ಪವನ್ ಖೇರಾ
ಡೊನಾಲ್ಡ್ ಟ್ರಂಪ್ / ಜ್ಞಾನೇಶ್ ಕುಮಾರ್ (Photo: PTI)
ಹೊಸದಿಲ್ಲಿ: ಭಾರತದ ಚುನಾವಣಾ ವ್ಯವಸ್ಥೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ ಬೆನ್ನಲ್ಲೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, ದಯವಿಟ್ಟು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ, ಸಂಸದ ಪವನ್ ಖೇರಾ, ಆತ್ಮೀಯ ಡೊನಾಲ್ಡ್ ಟ್ರಂಪ್ ಅವರೇ, ದಯವಿಟ್ಟು ಜ್ಞಾನೇಶ್ ಕುಮಾರ್ ಗುಪ್ತಾರನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಮತ್ತು ಅವರನ್ನು ಅಲ್ಲಿಯೇ ಇರಿಸಿ. ಲಭ್ಯವಿರುವ ಮುಂದಿನ ವಿಮಾನದಲ್ಲಿ ನಾವು ನಮ್ಮ ಇವಿಎಂಗಳನ್ನು ಕೂಡ ಕಳುಹಿಸುತ್ತೇವೆ. ನೀವು ನಮಗೆ ಮಾಡಿರುವ ಎಲ್ಲಾ ಅವಮಾನಗಳು ಮತ್ತು ಬೆದರಿಕೆಗಳಿಗೆ ಪ್ರತಿಯಾಗಿ ನಾವು ನಿಮಗಾಗಿ ಮಾಡಬಹುದಾದ ಕನಿಷ್ಠ ಕೆಲಸ ಇದಾಗಿದೆ ಎಂದು ಹೇಳಿದ್ದಾರೆ.
ಈ ಮೊದಲು ತಮ್ಮ ಟ್ರೂತ್ ಸೋಷಿಯಲ್ ನಲ್ಲಿ ಪೋಸ್ಟ್ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ತಿಂಗಳ ಆರಂಭದಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ 'ಮಾನ್ಯ ಫೋಟೋ ಗುರುತಿನ ಚೀಟಿ ಇಲ್ಲದೆ ಅಮೆರಿಕದಲ್ಲಿ ಚುನಾವಣೆಗಳನ್ನು ಹೇಗೆ ನಡೆಸುತ್ತೀರಿ?' ಎಂದು ಕೇಳಿದ್ದರು. ಭಾರತದ ಇತ್ತೀಚಿನ ಚುನಾವಣೆಯಲ್ಲಿ 64.6 ಕೋಟಿ ಮತದಾರರು ಭಾಗವಹಿಸಿದ್ದರು. ಈ ಚುನಾವಣೆಯಲ್ಲಿ ಶೇಕಡಾ 1ಕ್ಕಿಂತ ಕಡಿಮೆ ಮಂದಿ ಅಂಚೆ ಮೂಲಕ ಮತ ಚಲಾಯಿಸಿದ್ದು, ಪ್ರತಿಯೊಬ್ಬ ಮತದಾರರೂ ಮಾನ್ಯ ಫೋಟೋ ಗುರುತಿನ ದಾಖಲೆಯನ್ನು ಹೊಂದಿರುವುದು ಕಡ್ಡಾಯವಾಗಿತ್ತು. ನಾವು ಈಗಲೇ 'ದಿ ಸೇವ್ ಅಮೆರಿಕ ಕಾಯ್ದೆ'ಯನ್ನು ಅಂಗೀಕರಿಸುವ ಅಗತ್ಯವಿದೆ" ಎಂದು ಹೇಳಿದ್ದರು.
ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್‌ನಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೊಂದಿಗಿನ ಇತ್ತೀಚಿನ ಸಂಭಾಷಣೆಯನ್ನು ಉಲ್ಲೇಖಿಸಿರುವ ಟ್ರಂಪ್, ಭಾರತದಲ್ಲಿ ಮತದಾರರು ಫೋಟೋ ಗುರುತಿನ ಚೀಟಿ ಬಳಸುವ ವ್ಯವಸ್ಥೆಯನ್ನು ಪ್ರಸ್ತಾಪಿಸಿದ್ದರು.