ಪರೀಕ್ಷಾ ಸುಧಾರಣೆಗೆ ನಂದನ್ ನಿಲೇಕಣಿ ನೇತೃತ್ವದಲ್ಲಿ ಕಾರ್ಯಪಡೆ ರಚನೆ: ಪ್ರಧಾನಿ ಮೋದಿ
“ಮುಂಬರುವ ಪರೀಕ್ಷೆಗಳ ವಿಶ್ವಾಸಾರ್ಹತೆಗೆ ವರದಿ ಆಧರಿಸಿ ಕ್ರಮ”
ಪ್ರಧಾನಿ ಮೋದಿ - ನಂದನ್ ನಿಲೇಕಣಿ | Photo : PTI
ಹೊಸದಿಲ್ಲಿ: ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಲು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿದ್ದು, ಕಾರ್ಯಪಡೆ ಸಲ್ಲಿಸುವ ವರದಿಯ ಆಧಾರದ ಮೇಲೆ ಮುಂಬರುವ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ತಿಳಿಸಿದ್ದಾರೆ.
ಈ ಕುರಿತು ವೀಡಿಯೊ ಸಂದೇಶ ಬಿಡುಗಡೆ ಮಾಡಿರುವ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಕೇಂದ್ರ ಸರಕಾರ ನಿರಂತರವಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
"ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದವರು ಇಂದು ಜೈಲು ಸೇರಿದ್ದಾರೆ. ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಿದ್ದೇವೆ. ಕಠಿಣ ಕಾನೂನು ನಿಬಂಧನೆಗಳನ್ನು ಒಳಗೊಂಡ ಹೊಸ ಕಾನೂನನ್ನು ರೂಪಿಸುವ ದಿಕ್ಕಿನಲ್ಲಿ ಸರಕಾರ ಮುಂದುವರಿದಿದ್ದು, ಈ ವಿಷಯದಲ್ಲಿ ಸಂಸತ್ತಿನಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಅವರು ಹೇಳಿದರು.
ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ, ವ್ಯಂಗ್ಯಾತ್ಮಕ ರಾಜಕೀಯ ಸಂಘಟನೆ CJP (ಕಾಕ್ರೋಚ್ ಜನತಾ ಪಾರ್ಟಿ) ನೇತೃತ್ವದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆ ಅಂತ್ಯಗೊಂಡ ಮರುದಿನವೇ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.
ದೇಶದ ಪರೀಕ್ಷಾ ವ್ಯವಸ್ಥೆ ವಿಶ್ವಾಸಾರ್ಹ, ಪಾರದರ್ಶಕ ಹಾಗೂ ತಂತ್ರಜ್ಞಾನದ ಗರಿಷ್ಠ ಬಳಕೆಯನ್ನು ಹೊಂದಿರಬೇಕು ಎಂಬುದು ಸರಕಾರದ ಉದ್ದೇಶ ಎಂದು ಪ್ರಧಾನಿ ಹೇಳಿದರು.
"ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವಪ್ರಸಿದ್ಧ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲು ನಿರ್ಧರಿಸಲಾಗಿದೆ. ಈ ಕಾರ್ಯಪಡೆ ಪರೀಕ್ಷಾ ಸುಧಾರಣೆಗಳ ಕುರಿತು ಸಮಗ್ರವಾಗಿ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಸಾಧ್ಯವಾದಷ್ಟು ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು. ಅದರ ಶಿಫಾರಸುಗಳ ಆಧಾರದ ಮೇಲೆ ಮುಂಬರುವ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವ ಕೆಲಸ ಕೈಗೊಳ್ಳಲಾಗುವುದು" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.