ಚಲೋ ಸಂಸತ್ ಪ್ರತಿಭಟನಾಕಾರರ ಮೇಲೆ ಪೋಲಿಸರ ಬಲವಂತದ ಕ್ರಮ: ಕೇಂದ್ರ ಸರ್ಕಾರದ ಮುಂದೆ 5 ಬೇಡಿಕೆಗಳನ್ನಿಟ್ಟ ರಾಹುಲ್‌ ಗಾಂಧಿ

Update: 2026-07-22 09:48 IST

Photo: x.com/hawokattack

ಹೊಸದಿಲ್ಲಿ: ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿ ವಿಪಕ್ಷಗಳು ಸರ್ಕಾರದ ವಿರುದ್ಧ ನಡೆಸಿದ ಹೋರಾಟವು, ಧರಣಿ ಮತ್ತು ಬಂಧನಗಳಿಗೆ ಸಾಕ್ಷಿಯಾಯಿತು. ಇದೀಗ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಐದು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಹೊರಗೆ ಧರಣಿ ನಡೆಸುತ್ತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಹಲವು ಕಾಂಗ್ರೆಸ್ ನಾಯಕರನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದ್ದರು.

ಬಂಧನದಲ್ಲಿದ್ದಾಗ ರಾಹುಲ್ ಗಾಂಧಿ ಅವರು ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಸರ್ಕಾರದ ಮುಂದೆ ಐದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಗೃಹ ಸಚಿವ ಅಮಿತ್ ಶಾ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು. ಜುಲೈ 20ರಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ವಾಪಸು ಪಡೆಯಬೇಕು. ಜುಲೈ 20ರಂದು ನಡೆದ ಪೊಲೀಸರ ಬಲವಂತದ ಕ್ರಮದ ಬಗ್ಗೆ ಪ್ರಧಾನಿ ಕ್ಷಮೆಯಾಚಿಸಬೇಕು. ಸಂಸತ್ತಿನಲ್ಲಿ ನೀಟ್ ಚರ್ಚೆಗೆ ಅವಕಾಶ ನೀಡಬೇಕು. ಶೀಘ್ರದಲ್ಲಿಯೇ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಒತ್ತು ನೀಡಬೇಕು ಎಂದು 5 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿಯನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, "ಭಾರತದ ಶಿಕ್ಷಣ ವ್ಯವಸ್ಥೆ ಏಕೆ ಕುಸಿಯುತ್ತಿದೆ? ಪ್ರಶ್ನೆಪತ್ರಿಕೆಗಳು ಏಕೆ ಸೋರಿಕೆಯಾಗುತ್ತಿವೆ? ಭಾರತದಲ್ಲಿ ಶಿಕ್ಷಣ ಏಕೆ ಇಷ್ಟೊಂದು ದುಬಾರಿಯಾಗಿದೆ? ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಕುಟುಂಬಗಳು ಆರ್ಥಿಕವಾಗಿ ಏಕೆ ನಾಶವಾಗಬೇಕು? ಇವು ನ್ಯಾಯಯುತ ಪ್ರಶ್ನೆಗಳು, ಮತ್ತು ಇವುಗಳನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ" ಎಂದು ಹೇಳಿದ್ದಾರೆ.

ಬುಧವಾರ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗಬೇಕು ಎಂದು ವಿಪಕ್ಷಗಳು ಬಯಸಿವೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News