×
Ad

ಕೇರಳ ಸಾಹಿತ್ಯೋತ್ಸವ | ಉಮರ್ ಖಾಲಿದ್‌ ವಿರುದ್ಧ ಯುಎಪಿಎ ದುರುಪಯೋಗ: ಪ್ರಕಾಶ್‌ ರಾಜ್‌

Update: 2026-01-23 16:48 IST

ಪ್ರಕಾಶ್‌ ರಾಜ್‌ | Photo Credit : @keralalitfest

ಕೋಝಿಕ್ಕೋಡ್: ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ರಸ್ತೆ ತಡೆಯು ಯಾವಾಗಿನಿಂದ ಭಯೋತ್ಪಾದಕ ಕೃತ್ಯವಾಯಿತು ಎಂದು ಪ್ರಶ್ನಿಸಿದ ಖ್ಯಾತ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್‌ ರಾಜ್, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಬಳಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕೇರಳ ಸಾಹಿತ್ಯೋತ್ಸವದಲ್ಲಿ ರಾಜಕೀಯ ಭಿನ್ನಾಭಿಪ್ರಾಯದ ಕುರಿತು ಗುರುವಾರ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಧಿಕಾರದಲ್ಲಿರುವ ಈ ‘ಮಹಾಪ್ರಭು’ (ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ) ಭಿನ್ನಾಭಿಪ್ರಾಯದ ಶಬ್ದವನ್ನೇ ಸಹಿಸುವುದಿಲ್ಲ ಎಂದು ಟೀಕಿಸಿದರು.

‘ಭಿನ್ನಾಭಿಪ್ರಾಯದ ಅಪರಾಧೀಕರಣ! ಧ್ವನಿಯೆತ್ತಿದ್ದಕ್ಕಾಗಿ ಯಾರು ಬಂಧನಕ್ಕೊಳಗಾಗುತ್ತಾರೆ?’ ಎಂಬ ಶೀರ್ಷಿಕೆಯ ಉದ್ಘಾಟನಾ ಅಧಿವೇಶನದಲ್ಲಿ ತನಿಖಾ ಪತ್ರಕರ್ತ ಜೋಸಿ ಜೋಸೆಫ್ ಅವರೊಂದಿಗೆ ನಡೆದ ಸಂವಾದದಲ್ಲಿ ಪ್ರಕಾಶ್‌ ರಾಜ್‌, ಮುಖ್ಯವಾಹಿನಿ ಮಾಧ್ಯಮಗಳ ಶರಣಾಗತಿ, ನ್ಯಾಯಾಂಗದ ಸ್ವಾತಂತ್ರ್ಯ ಕುಸಿತ ಹಾಗೂ ಸಾಂವಿಧಾನಿಕ ಸಂಸ್ಥೆಗಳ ದುರ್ಬಲಗೊಳ್ಳುತ್ತಿರುವ ಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದರು. ಈ ಚರ್ಚೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಸೋನಂ ವಾಂಗ್ಚುಕ್ ಹಾಗೂ ಉಮರ್ ಖಾಲಿದ್‌ ವಿಚಾರಗಳೂ ಚರ್ಚೆಗೆ ಬಂದವು.

ತಮ್ಮ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಕಾಶ್‌ ರಾಜ್‌, ‘ನನ್ನನ್ನು ದೇಶವಿರೋಧಿ, ಪೆರಿಯಾರ್‌ವಾದಿ, ಹಿಂದೂ ವಿರೋಧಿ ಎಂದು ಕರೆಯಲಾಗಿದೆ. ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಹಾಗೂ ಸಮಯ ವ್ಯರ್ಥಗೊಳಿಸಲು ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ನಾವು ವಿಭಿನ್ನ ಸತ್ವದಿಂದ ತಯಾರಾದವರು ಎನ್ನುವುದು ಅವರಿಗೆ ತಿಳಿದಿಲ್ಲ’ ಎಂದು ಹೇಳಿದರು.

ಲಡಾಖ್‌ನ ಶಿಕ್ಷಣ ತಜ್ಞ ಹಾಗೂ ಪರಿಸರವಾದಿ ಸೋನಂ ವಾಂಗ್ಚುಕ್‌ ಅವರ ಹೋರಾಟವನ್ನು ಉಲ್ಲೇಖಿಸಿದ ಅವರು, ಹಿಮಾಲಯದ ಸೂಕ್ಷ್ಮ ಪರಿಸರದಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳ ವಿರುದ್ಧ ವಾಂಗ್ಚುಕ್ ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಲು ತಾವು ಲಡಾಖ್‌ಗೆ ತೆರಳಿದ್ದುದನ್ನು ನೆನಪಿಸಿದರು. ವಾಂಗ್ಚುಕ್ ಅವರನ್ನು ಅವರ ತವರು ಲಡಾಖ್‌ನಿಂದ ಬಹುದೂರದ ರಾಜಸ್ಥಾನದಲ್ಲಿ ಮೂರು ಪದರಗಳ ಗೋಡೆಯ ಹಿಂದೆ ಬಂಧನದಲ್ಲಿಟ್ಟಿದ್ದು, ಅವರ ಪತ್ನಿಗೂ ಅವರನ್ನು ಭೇಟಿಯಾಗಲು ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.

ಸಾಂವಿಧಾನಿಕ ಸಂಸ್ಥೆಗಳ ಸ್ಥಿತಿಗತಿ ಕುರಿತು ಮಾತನಾಡಿದ ಪ್ರಕಾಶ್‌ ರಾಜ್‌, ಹಿಂದಿನ ಸರ್ಕಾರಗಳೂ ಪೊಲೀಸರನ್ನು ದುರುಪಯೋಗ ಮಾಡಿಕೊಂಡಿದ್ದವು ಎಂದು ಒಪ್ಪಿಕೊಂಡರೂ, ಒಂದು ಕಾಲದಲ್ಲಿ ‘ಅಂತಿಮ ಭರವಸೆ’ಯಾಗಿದ್ದ ನ್ಯಾಯಾಂಗವನ್ನು ಈಗ ಅನೇಕರು ‘ತಮಾಷೆ’ಯಾಗಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಎಂದು ಹೇಳಿದರು.

‘ವಿಚಾರಣೆ ಅಪರಾಧಿಗಳ ಬಗ್ಗೆ ಮಾತ್ರವಲ್ಲ, ನ್ಯಾಯಾಧೀಶರ ಆತ್ಮಸಾಕ್ಷಿಯ ಬಗ್ಗೆಯೂ ನಡೆಯಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಚುನಾವಣಾ ಪ್ರಜಾಪ್ರಭುತ್ವದ ಆಟದಲ್ಲಿ ‘ಕಾಲ್ಚೆಂಡು’ಗಳಾಗುವುದನ್ನು ನಿಲ್ಲಿಸುವಂತೆ ಸಾರ್ವಜನಿಕರನ್ನು ಆಗ್ರಹಿಸಿದ ಅವರು, ರಾಜಕೀಯವಾಗಿ ಹೆಚ್ಚು ಸಕ್ರಿಯರಾಗಬೇಕೆಂದು ಕರೆ ನೀಡಿದರು.

‘ಶಿಕ್ಷಣವೆಂದರೆ ಪದವಿ ಮಾತ್ರವಲ್ಲ; ಅದು ಅರಿವು ಮತ್ತು ವಿಮೋಚನೆ. ಸಣ್ಣ ಗುಂಪುಗಳಲ್ಲಿ ಮಾತನಾಡುವುದರಲ್ಲಿ ತೃಪ್ತಿಪಡಬಾರದು. ಈ ಅರಿವನ್ನು ನಮ್ಮ ನೆರೆಹೊರೆಗಳಿಗೂ ತಲುಪಿಸಬೇಕು. ದೋಣಿಯಲ್ಲಿ ಒಂದು ರಂಧ್ರವಿದ್ದರೆ, ನಾವೆಲ್ಲ ಸೇರಿ ಅದನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಸಿದ್ಧಾಂತ ಏನೇ ಆಗಿದ್ದರೂ ನಾವೆಲ್ಲ ಮುಳುಗುತ್ತೇವೆ’ ಎಂದು ಪ್ರಕಾಶ್‌ ರಾಜ್‌ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News