ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ಅಂಕಿತ
ದ್ರೌಪದಿ ಮುರ್ಮು | Photo Credit : PTI
ಹೊಸದಿಲ್ಲಿ: ಗುರುವಾರ ತಡರಾತ್ರಿ ಸಂಸತ್ತಿನ ಒಪ್ಪಿಗೆ ಪಡೆದಿದ್ದ ಪ್ರಶ್ನೆಪತ್ರಿಕೆ ಸೋರಿಕೆ ನಿಗ್ರಹ ಕಾಯ್ದೆಯ ತಿದ್ದುಪಡಿ ಮಸೂದೆಗೆ ಶನಿವಾರ ರಾಷ್ಟ್ರಪತಿಗಳ ಅಂಕಿತ ದೊರಕಿದೆ.
ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳಲ್ಲಿ ತೊಡಗಿಸಿಕೊಂಡವರಿಗೆ ಕಠಿಣ ಶಿಕ್ಷೆಯನ್ನು ಪ್ರಸ್ತಾವಿಸಿರುವ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ಮಾರ್ಗಗಳ ತಡೆ) ತಿದ್ದುಪಡಿ ವಿಧೇಯಕ, 2026ನ್ನು ಏಳು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸುದೀರ್ಘ ಚರ್ಚೆಯ ನಂತರ ರಾಜ್ಯಸಭೆಯು ಅಂಗೀಕರಿಸಿತ್ತು.
ಇದಕ್ಕೂ ಮೊದಲು ಬುಧವಾರ ಲೋಕಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ಸಂಘಟಿತ ಗುಂಪುಗಳು, ವ್ಯಕ್ತಿಗಳು ಮತ್ತು ಸಂಸ್ಥೆಗಳು ಅಕ್ರಮ ಮಾರ್ಗಗಳನ್ನು ಅನುಸರಿಸುವುದನ್ನು ಹಾಗೂ ಸಾರ್ವಜನಿಕ ಪರೀಕ್ಷೆಗಳ ಪಾವಿತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡುವುದನ್ನು ತಡೆಯುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.
ಈ ಮಸೂದೆಯು ಸರಕಾರವು ತೀವ್ರ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಗಳನ್ನು ಎದುರಿಸುತ್ತಿದ್ದಾಗ ತರಲಾಗಿದ್ದ 2024ರ ಕಾಯ್ದೆಗೆ ಪ್ರಮುಖ ಬದಲಾವಣೆಗಳನ್ನು ಪ್ರಸ್ತಾವಿಸಿದೆ.
ಈ ಶಾಸನ ಜಾರಿಗೆ ಬರುವ ಮೊದಲು ಕೇಂದ್ರ ಸರಕಾರ ಮತ್ತು ಅದರ ಸಂಸ್ಥೆಗಳು ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ವಿವಿಧ ಸಂಸ್ಥೆಗಳು ಅಥವಾ ವ್ಯಕ್ತಿಗಳು ಎಸಗುವ ಅಕ್ರಮಗಳು ಮತ್ತು ಅಪರಾಧಗಳನ್ನು ತಡೆಯಲು ಯಾವುದೇ ನಿರ್ದಿಷ್ಟವಾದ ಕಾನೂನು ಇರಲಿಲ್ಲ.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ),ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ),ರೈಲ್ವೆ,ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮತ್ತಿತರ ಸಂಸ್ಥೆಗಳು ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವುದನ್ನು ಈ ಕಾನೂನು ಗುರಿಯಾಗಿಸಿಕೊಂಡಿದೆ.