'ಇಲ್ಲಿ ಕಸ, ವಿದೇಶದಲ್ಲಿ ನೈರ್ಮಲ್ಯ': ಭಾರತೀಯರ ಮನಃಸ್ಥಿತಿಗೆ ಬಾಂಬೆ ಹೈಕೋರ್ಟ್ ಅಸಮಾಧಾನ

Update: 2026-08-01 17:28 IST

ಬಾಂಬೆ ಹೈಕೋರ್ಟ್‌ | Photo Credit : PTI

ಮುಂಬೈ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲುವ ಸಂಸ್ಕೃತಿಯನ್ನು ಮುಂಬೈ ಉಚ್ಚ ನ್ಯಾಯಾಲಯವು ಶುಕ್ರವಾರ ತೀವ್ರವಾಗಿ ಖಂಡಿಸಿದ್ದು, ಅನೇಕ ಭಾರತೀಯರು ವಿದೇಶಗಳಲ್ಲಿ ಕಟ್ಟುನಿಟ್ಟಾದ ನೈರ್ಮಲ್ಯ ನಿಯಮಗಳನ್ನು ಪಾಲಿಸುತ್ತಾರೆ, ಆದರೆ ಸ್ವದೇಶದಲ್ಲಿ ಅದೇ ಮಾನದಂಡಗಳನ್ನು ಕಾಯ್ದುಕೊಳ್ಳಲು ಏಕೆ ವಿಫಲರಾಗುತ್ತಾರೆ ಎಂದು ಪ್ರಶ್ನಿಸಿದೆ.

ಇಂತಹ ನಡವಳಿಕೆಯನ್ನು ಸ್ವಾತಂತ್ರ್ಯ ಅಥವಾ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದ ನ್ಯಾಯಾಲಯವು, ನಾಗರಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಮತ್ತು ಪೌರಾಡಳಿತ ಅಧಿಕಾರಿಗಳು ನೈರ್ಮಲ್ಯ ನಿಯಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಹೇಳಿತು.

ಮುಂಬೈನ ಉಪನಗರ ಕಾಂಜುರ್‌ಮಾರ್ಗ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಬಂಧಿಸಿದ ಮಾಲಿನ್ಯ, ದುರ್ನಾತ, ಅನಿಲ ಹೊರಸೂಸುವಿಕೆ ಮತ್ತು ಆರೋಗ್ಯದ ಅಪಾಯಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಜಿ.ಎಸ್.ಕುಲಕರ್ಣಿ ಮತ್ತು ಆರತಿ ಸಾಠೆ ಅವರ ಪೀಠವು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಕಠಿಣ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳನ್ನು ಆಗ್ರಹಿಸಿತು.

‘ಒಬ್ಬ ವ್ಯಕ್ತಿಗೆ ಸ್ವಚ್ಛ ವಾತಾವರಣ ಬೇಕು ಎಂದಾದರೆ ಅಂತಹ ವ್ಯಕ್ತಿಗೆ ಸ್ವಚ್ಛತೆಯನ್ನು ಕಾಪಾಡುವ ಸಾಮಾಜಿಕ ಮೂಲಭೂತ ಕರ್ತವ್ಯವೂ ಇರುತ್ತದೆ. ಪಾಲಿಕೆ ಅಧಿಕಾರಿಗಳು ಕಸ ಚೆಲ್ಲುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾವು ಬಯಸುತ್ತೇವೆ’ ಎಂದು ನ್ಯಾಯಾಲಯವು ಹೇಳಿತು.

‘ನಾವು ನಮ್ಮ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಇಲ್ಲಿ ವ್ಯಕ್ತಿಯೊಬ್ಬ ಕಣ್ಣು ಮುಚ್ಚಿ ತೆರೆಯುವುದರೊಳಗೆ ರಸ್ತೆಯ ಮೇಲೆ ಕಸ ಎಸೆಯುತ್ತಾನೆ, ಆದರೆ ಇದೇ ಜನರು ವಿದೇಶಕ್ಕೆ ಹೋದಾಗ ಇಂತಹ ನಡವಳಿಕೆಯನ್ನು ಕಟ್ಟುನಿಟ್ಟಾಗಿ ತಡೆಯುತ್ತಾರೆ. ಸಣ್ಣ ಚಾಕೊಲೇಟ್ ಕಾಗದವನ್ನೂ ಅವರು ಕಸದ ಬುಟ್ಟಿಗೇ ಹಾಕುತ್ತಾರೆ’ ಎಂದು ಹೇಳಿದ ಪೀಠವು, ‘ಇದು ನಾವು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ನೀಡುತ್ತಿರುವ ಬೆಲೆಯೇ?’ ಎಂದು ಪ್ರಶ್ನಿಸಿತು.

ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಉಲ್ಲೇಖಿಸಿದ ನ್ಯಾಯಾಲಯ, ‘ನಗರದ ಸಮುದ್ರ ತೀರಗಳೂ ಸಹ ಪ್ಲಾಸ್ಟಿಕ್‌ನಿಂದ ತುಂಬಿಹೋಗಿವೆ, ನಾವು ನಿಜಕ್ಕೂ ನಾಗರಿಕ ಸಮಾಜದಲ್ಲಿ ಜೀವಿಸುತ್ತಿದ್ದೇವೆಯೇ?’ ಎಂದು ಕಳವಳ ವ್ಯಕ್ತಪಡಿಸಿತು.

ಬೃಹನ್ಮುಂಬೈ ಮಹಾನಗರ ಪಾಲಿಕೆಯ ‘ಸ್ವಚ್ಛ ಮುಂಬೈ ಸುಂದರ ಮುಂಬೈ,ನಮ್ಮ ಮುಂಬೈ ಸುಂದರ ಮುಂಬೈ’ ಎಂಬ ಘೋಷವಾಕ್ಯವನ್ನು ಉಲ್ಲೇಖಿಸಿದ ನ್ಯಾಯಾಲಯವು, ಅದರ ಉದ್ದೇಶವು ಸ್ಪಷ್ಟವಾಗಿದೆ, ಆದರೆ ನಾಗರಿಕರ ಬೇಜವಾಬ್ದಾರಿ ಹಾಗೂ ಪೌರಾಡಳಿತ ವ್ಯವಸ್ಥೆಯ ನಿಷ್ಕ್ರಿಯತೆಯಿಂದಾಗಿ ಅದು ವಿಫಲಗೊಳ್ಳುತ್ತಿದೆ ಎಂದು ಬೆಟ್ಟು ಮಾಡಿತು.

ನಗರದಲ್ಲಿಯ ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡುವ ವಿದೇಶಿಯರು ಸೇರಿದಂತೆ ಅನೇಕ ಪ್ರವಾಸಿಗರು ಪಾಲಿಕೆಯ ಕಸ ಸಂಗ್ರಹಣಾ ಟ್ರಕ್‌ಗಳ ಅಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದಾಗಿ ರಸ್ತೆಗಳಲ್ಲಿ ಕಸ ಬಿದ್ದಿರುವುದನ್ನು ನೋಡುತ್ತಿದ್ದಾರೆ ಎಂದು ಪೀಠವು ಹೇಳಿತು.

ತ್ಯಾಜ್ಯ ಸಮಸ್ಯೆಯ ಕುರಿತು ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದ ಪೀಠವು,ಇಲ್ಲದಿದ್ದರೆ ಕಠಿಣ ಆದೇಶಗಳನ್ನು ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News