ಕೆನಡಾದಲ್ಲಿ ಪಂಜಾಬ್ ಮೂಲದ ಯುವತಿಯ ಹತ್ಯೆ : ಭಾರತೀಯ ಸಂಗಾತಿಯ ಬಂಧನ

Update: 2026-07-25 11:43 IST
Photo | GoFundMe

ಟೊರಾಂಟೊ: ಪಂಜಾಬ್ ನ ಲೂಧಿಯಾನ ಮೂಲದ 23 ವರ್ಷದ ವಿದ್ಯಾರ್ಥಿನಿಯನ್ನು ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ಕೆನಡಾದ ಎಡ್ಮಾಂಟನ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ  ಕೆನಡಾ ಪೊಲೀಸರು ಮಹಿಳೆಯೊಂದಿಗೆ ಸಹಜೀವನ ನಡೆಸುತ್ತಿದ್ದ ಭಾರತೀಯ ಮೂಲದ ಸಂಗಾತಿಯನ್ನು ಬಂಧಿಸಿದ್ದಾರೆ.

ಮೃತ ಯುವತಿಯನ್ನು ದಮನ್ ಪ್ರೀತ್ ಕೌರ್ ಎಂದು ಗುರುತಿಸಲಾಗಿದೆ. ಅವರು ಮೂಲತಃ ಸಮ್ರಲಾ ಗ್ರಾಮದವರು ಎನ್ನಲಾಗಿದೆ. ಅವರು ವ್ಯಾಸಂಗ ಮುಂದುವರಿಸಲು ವಿದ್ಯಾರ್ಥಿ ವೀಸಾದಲ್ಲಿ ಕೆನಡಾಗೆ ತೆರಳಿದ್ದರು ಎಂದು ಹೇಳಲಾಗಿದೆ.

ಈ ಕುರಿತು ರಿತೀಶ್ ಕುಮಾರ್(22) ಎಂಬಾತನನ್ನು ಹತ್ಯೆ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.  

ಎಡ್ಮಾಂಟನ್ ಪೊಲೀಸರು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆ ಪ್ರಕಾರ, ಈಶಾನ್ಯ ಎಡ್ಮಾಂಟನ್ ನ ಸಿಲ್ವರ್ ಬೆರ್ರಿಯ ಸಮೀಪದ ನಿವಾಸವೊಂದರಲ್ಲಿ ಮಹಿಳೆಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಅವರ ದೇಹದ ಮೇಲೆ ಗಾಯದ ಗುರುತುಗಳಿರುವಂತೆ ಕಂಡು ಬರುತ್ತಿದೆ ಎಂಬ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ದಮನ್ ಪ್ರೀತ್ ಕೌರ್ ಮೃತದೇಹವನ್ನು ಭಾರತಕ್ಕೆ ರವಾನಿಸಲು ‘GoFundMe’ ಅಭಿಯಾನ ನಡೆಸಲಾಗುತ್ತಿದ್ದು, ಈವರೆಗೆ 20,000 ಡಾಲರ್ ಗುರಿಯ ಪೈಕಿ, 18,000 ಡಾಲರ್ ಅನ್ನು ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News