"ಭ್ರಷ್ಟಾಚಾರಕ್ಕೆ ಪ್ರತಿಫಲ" : ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯ ಬದಲಾವಣೆ ಬಗ್ಗೆ CJP ಆರೋಪ
ಹೊಸದಿಲ್ಲಿ: ಕೇಂದ್ರ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯ ವರ್ಗಾವಣೆ ಹೊಣೆಗಾರಿಕೆ ನಿಗದಿಪಡಿಸುವ ಬದಲು ಭ್ರಷ್ಟಾಚಾರಕ್ಕೆ ಪ್ರತಿಫಲ ನೀಡಿದಂತಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಶನಿವಾರ ಆರೋಪಿಸಿದರು. ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯ ಸ್ಥಾನಕ್ಕೆ ಗಂಭೀರ ಬಹುಕೋಟಿ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಪಶುಸಂಗೋಪನಾ ಇಲಾಖೆಯ ಐಎಎಸ್ ಅಧಿಕಾರಿಯನ್ನು ನೇಮಿಸಿರುವುದನ್ನು ಅವರು ಆಕ್ಷೇಪಿಸಿದರು.
"ಶುಕ್ರವಾರ ರಾತ್ರಿ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯನ್ನು ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಗಂಭೀರ, ಬಹುಕೋಟಿ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಪಶುಸಂಗೋಪನಾ ಇಲಾಖೆಯ ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ NEET ಪರೀಕ್ಷೆ ಸುತ್ತ ಉದ್ಭವಿಸಿರುವ ಬಿಕ್ಕಟ್ಟು ವ್ಯವಸ್ಥಿತ ಭ್ರಷ್ಟಾಚಾರದ ಪರಿಣಾಮವಾಗಿದೆ" ಎಂದು ದೀಪ್ಕೆ ಎಕ್ಸ್ ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.
"ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಮತ್ತೊಬ್ಬ ಅಧಿಕಾರಿಯನ್ನು ನೇಮಿಸಿರುವುದು ದೇಶದ ಯುವಜನರಿಗೆ ಮಾಡುವ ನೇರ ಅವಮಾನ. ವಿದ್ಯಾರ್ಥಿಗಳು ಒಪ್ಪಿಕೊಳ್ಳಬೇಕೆಂದು ಸರಕಾರ ನಿರೀಕ್ಷಿಸುವ 'ರಾಜಿ' ಇದೇನಾ? ಇದು ಹೊಣೆಗಾರಿಕೆಯಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ" ಎಂದು ಅವರು ಹೇಳಿದ್ದಾರೆ.
NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ, ಕೇಂದ್ರವು ಗುರುವಾರ ಶಿಕ್ಷಣ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 13 ಕಾರ್ಯದರ್ಶಿ ಮಟ್ಟದ ನೇಮಕಾತಿಗಳನ್ನು ಪ್ರಕಟಿಸಿತ್ತು.
ಕ್ಯಾಬಿನೆಟ್ ನೇಮಕಾತಿ ಸಮಿತಿ(ACC) ಹೊರಡಿಸಿದ ಆದೇಶದ ಪ್ರಕಾರ, ಹಿರಿಯ IAS ಅಧಿಕಾರಿ ನರೇಶ್ ಪಾಲ್ ಗಂಗ್ವಾರ್ ಅವರನ್ನು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಹಾಗೂ ಟಿ.ಕೆ. ಅನಿಲ್ ಕುಮಾರ್ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ರಾಜಸ್ಥಾನ ಕೇಡರ್‌ನ 1994ರ ಬ್ಯಾಚ್ ನ IAS ಅಧಿಕಾರಿ ಗಂಗ್ವಾರ್ ಅವರು ವಿನೀತ್ ಜೋಶಿ ಅವರ ನಂತರ ಉನ್ನತ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧದ ಪ್ರತಿಭಟನೆಗಳು ಶುಕ್ರವಾರ ಹಲವು ರಾಜ್ಯಗಳಿಗೆ ವಿಸ್ತರಿಸಿವೆ. ರಾಷ್ಟ್ರವ್ಯಾಪಿ ಪ್ರತಿಭಟನೆಗೆ CJP ಕರೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಜುಲೈ 20ರಂದು ದಿಲ್ಲಿ ಪೊಲೀಸರು ನಡೆಸಿದ ದಬ್ಬಾಳಿಕೆಯನ್ನು ಪ್ರತಿಭಟನಾಕಾರರು ಖಂಡಿಸಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹವನ್ನು ಪುನರುಚ್ಚರಿಸಿದ್ದಾರೆ.
ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, "NEET ಮತ್ತು CBSE ಪರೀಕ್ಷೆಗಳಲ್ಲಿನ ಅಕ್ರಮಗಳು ಹಾಗೂ ನಂತರದ ಮೋದಿ ಸರಕಾರದ ದಮನಕಾರಿ ಕ್ರಮಗಳ" ವಿರುದ್ಧ ಶನಿವಾರ ಸಂಜೆ ಪ್ರತಿ ಜಿಲ್ಲೆಯಲ್ಲೂ ಕ್ಯಾಂಡಲ್ ಲೈಟ್ ಮೆರವಣಿಗೆಗಳು ಮತ್ತು 'ಸತ್ಯಾಗ್ರಹ'ಗಳನ್ನು ಆಯೋಜಿಸುವಂತೆ ಕಾಂಗ್ರೆಸ್ ತನ್ನ ರಾಜ್ಯ ಘಟಕಗಳಿಗೆ ನಿರ್ದೇಶನ ನೀಡಿದೆ.