18 ವರ್ಷದೊಳಗಿನವರ ಸಾಮಾಜಿಕ ಮಾಧ್ಯಮ ಖಾತೆ ನಿರ್ಬಂಧಕ್ಕೆ ನಿಯಮ ಬಿಗಿ: ಸುಪ್ರೀಂಕೋರ್ಟ್ ಗೆ ತಿಳಿಸಿದ ಸಾಲಿಸಿಟರ್ ಜನರಲ್
ಸಾಂದರ್ಭಿಕ ಚಿತ್ರ Photo: magnific
ಹೊಸದಿಲ್ಲಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆಯುವುದನ್ನು ತಡೆಯುವ ಉದ್ದೇಶದಿಂದ, ಮಾಹಿತಿ ತಂತ್ರಜ್ಞಾನ ಮಧ್ಯವರ್ತಿ ನಿಯಮಗಳಲ್ಲಿ ಶೀಘ್ರದಲ್ಲೇ ಹೊಸ ನಿಬಂಧನೆಯೊಂದನ್ನು ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ ಎಂದು timesofindia ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ್ ಅವರಿದ್ದ ಪೀಠ ಹಾಗೂ ಅರ್ಜಿದಾರ ಎನ್ಜಿಒ ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್’ ಪರ ವಕೀಲ ಎಚ್.ಎಸ್. ಫೂಲ್ಕಾ ಅವರ ವಾದವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಒಪ್ಪಿಕೊಂಡರು ಎಂದು ವರದಿ ತಿಳಿಸಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಅಪ್ರಾಪ್ತರ ನಡುವೆ ಏರ್ಪಡುವ ಒಪ್ಪಂದಗಳು ಕಾನೂನುಬದ್ಧವಾಗಿ ಅಮಾನ್ಯವಾಗುತ್ತವೆ (void contracts) ಎಂದು ಮೆಹ್ತಾ ಅವರು ಪೀಠದ ಮುಂದೆ ತಿಳಿಸಿದ್ದಾರೆ.
ಪೋಷಕರ ಸಮ್ಮತಿಯೊಂದಿಗೆ ಅಪ್ರಾಪ್ತರು ಶೈಕ್ಷಣಿಕ ವೆಬ್ಸೈಟ್ ಗಳ ಸದಸ್ಯತ್ವ ಪಡೆಯಬಹುದು ಎಂದು ತುಷಾರ್ ಮೆಹ್ತಾ ತಿಳಿಸಿದರು. ಆದರೆ ಅಪ್ರಾಪ್ತರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದುವುದನ್ನು ತಡೆಯುವುದು ಮಧ್ಯವರ್ತಿಗಳ ಶಾಸನಬದ್ಧ ಹೊಣೆಗಾರಿಕೆಯಾಗುವಂತೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ, “ಅವರು ಅಮೆರಿಕದ ಕಾನೂನುಗಳ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದು, ಅಲ್ಲಿನ ನಿರ್ಬಂಧಗಳನ್ನು ಭಾರತೀಯ ಡಿಜಿಟಲ್ ಜಗತ್ತಿಗೂ ಅನ್ವಯಿಸಿದ್ದಾರೆ. ಆದರೆ ಭಾರತೀಯ ಕಾನೂನಿನ ಪ್ರಕಾರ ಇದು ಅನುಮತಿಸಲಾಗದು,” ಎಂದು ಹೇಳಿದರು.
“ನಾವು ಈ ಮಧ್ಯವರ್ತಿಗಳನ್ನು ನಿಯಂತ್ರಿಸಬೇಕಾಗುತ್ತದೆ,” ಎಂದು ಮೆಹ್ತಾ ಹೇಳಿದಾಗ, ಪೀಠವು, “ಅವರು ತಮ್ಮ ಸಾಫ್ಟ್‌ವೇರ್ ಅಥವಾ ಪ್ಲಾಟ್ಫಾರ್ಮ್‌ಗಳನ್ನು ಭಾರತೀಯ ಕಾನೂನುಗಳಿಗೆ ಅನುಗುಣವಾಗಿ ರೂಪಿಸಿಕೊಳ್ಳುವಂತೆ ಮಧ್ಯವರ್ತಿ ನಿಯಮಗಳ ಅಡಿಯಲ್ಲಿ ಕೇಂದ್ರ ಸರ್ಕಾರ ನಿರ್ದೇಶನ ನೀಡಲಿದೆಯೇ?” ಎಂದು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್, “ಅವರು ಭಾರತೀಯ ಕಾನೂನುಗಳಿಗೆ ಬದ್ಧರಾಗಿರಲೇಬೇಕು. ಇದರಲ್ಲಿ ಯಾವುದೇ ಸಂದೇಹವಿಲ್ಲ. ಅಗತ್ಯ ಕ್ರಮ ಕೈಗೊಳ್ಳಬಹುದು, ಕೈಗೊಳ್ಳಲೇಬೇಕು ಮತ್ತು ಖಂಡಿತವಾಗಿಯೂ ಕೈಗೊಳ್ಳಲಾಗುವುದು,” ಎಂದು ಹೇಳಿದರು.
ನ್ಯಾಯಮೂರ್ತಿ ಬಾಗ್ಚಿ ಮುಂದುವರಿದು, “ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಕನಿಷ್ಠ 18 ವರ್ಷ ವಯೋಮಿತಿಯನ್ನು ಕಡ್ಡಾಯಗೊಳಿಸಬೇಕು,” ಎಂದು ಹೇಳಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್, ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಭಾರತೀಯ ಕಾನೂನುಗಳನ್ನು ಪಾಲಿಸುವಂತೆ ಮಾಡಲು ಈ ನಿಯಮವನ್ನು ಕಾನೂನು ಅಥವಾ ನಿಯಮಾವಳಿಗಳಲ್ಲಿ ಅಳವಡಿಸಬೇಕಾಗಿದೆ ಎಂದು ತಿಳಿಸಿದರು.