ಸೋನಮ್ ವಾಂಗ್ಚುಕ್ ಸ್ಥಿತಿ ಚಿಂತಾಜನಕ; ಏನಾದರೂ ಆದರೆ ಕೇಂದ್ರ ಸರ್ಕಾರವೇ ಹೊಣೆ: ಸಾಕೇತ್ ಗೋಖಲೆ
Photo credit: PTI
ಹೊಸದಿಲ್ಲಿ, ಜು. 15: ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಉಪವಾಸ ಮುಷ್ಕರ 18ನೇ ದಿನಕ್ಕೆ ಕಾಲಿರಿಸಿದ್ದು, ಅವರಿಗೆ ಏನಾದರೂ ಆದರೆ ಕೇಂದ್ರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಅವರು ಬುಧವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನಕಾರರೊಂದಿಗೆ ಮಾತುಕತೆ ಆರಂಭಿಸುವಂತೆ ಪ್ರಧಾನ್ ಅವರನ್ನು ಒತ್ತಾಯಿಸಿರುವ ಗೋಖಲೆ ಅವರು, ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
ಗೋಖಲೆ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ, ‘‘NEET ಪರೀಕ್ಷೆ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಿಂದ ಉಂಟಾದ ಒತ್ತಡದಿಂದಾಗಿ 12 ಯುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ವ್ಯವಸ್ಥೆಯ ವೈಫಲ್ಯದಿಂದಾಗಿ ಪ್ರಾಣ ಕಳೆದುಕೊಂಡ ಅಮಾಯಕರ ಬಗ್ಗೆ ನಾವು ಇಲ್ಲಿ ಮಾತನಾಡುತ್ತಿದ್ದೇವೆ’’ ಎಂದು ಹೇಳಿದ್ದಾರೆ.
ಪ್ರಧಾನ್ ಅವರನ್ನು ಉದ್ದೇಶಿಸಿ ಮಾತನಾಡಿರುವ ಅವರು, NEET ಮತ್ತು CBSE ಪರೀಕ್ಷೆಗಳಲ್ಲಿ ಪದೇ ಪದೇ ನಡೆಯುತ್ತಿರುವ ಅಕ್ರಮಗಳ ಹೊಣೆ ಹೊತ್ತು ನೀವು ರಾಜೀನಾಮೆ ನೀಡಬೇಕು ಎಂಬುದು ವಾಂಗ್ಚುಕ್ ಮತ್ತು ಪ್ರತಿಭಟನಕಾರರ ಆಗ್ರಹವಾಗಿದೆ ಎಂದಿದ್ದಾರೆ.
‘‘ಟಿವಿ ಕಾರ್ಯಕ್ರಮದಲ್ಲಿ ನೀವು ಈ ವಿಷಯದಲ್ಲಿ ಹೊಣೆ ಹೊತ್ತುಕೊಂಡಿದ್ದೀರಿ. ಪ್ರಜಾಪ್ರಭುತ್ವದಲ್ಲಿ ಇಂತಹ ವೈಫಲ್ಯಗಳ ನಂತರ ರಾಜೀನಾಮೆ ನೀಡುವುದು ಜವಾಬ್ದಾರಿಯುತ ಸಚಿವರ ಸರಿಯಾದ ಮತ್ತು ನೈತಿಕ ನಡೆಯಾಗಿದೆ. ನೀವು ರಾಜೀನಾಮೆ ನೀಡಲು ಮುಂದಾಗದಿರುವುದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಯುವಕರ ಆಕ್ರೋಶಕ್ಕೆ ಕಾರಣವಾಗಿದೆ’’ ಎಂದಿದ್ದಾರೆ.
ನೀವು ರಾಜೀನಾಮೆ ನೀಡುತ್ತಿರೋ ಇಲ್ಲವೋ ಎಂಬುದು ನಿಮ್ಮ ನೈತಿಕತೆಗೆ ಬಿಟ್ಟ ವಿಚಾರವಾಗಿದೆ. ಆದರೆ, ಲಕ್ಷಾಂತರ ವಿದ್ಯಾರ್ಥಿಗಳ ಪರವಾಗಿ ವಾಂಗ್ಚುಕ್ ವ್ಯಕ್ತಪಡಿಸುತ್ತಿರುವ ಕಳವಳಗಳನ್ನು ಅರ್ಥ ಮಾಡಿಕೊಳ್ಳಲು ನೀವು ಅವರೊಂದಿಗೆ ಸಂವಹನ ಆರಂಭಿಸದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.