ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳು 50 ಶೇ. ಏರಿಕೆಯಾಗಲಿ: ಸಂಸದೆ ಸುಪ್ರಿಯಾ ಸುಳೆ
Photo credit: PTI
ಮುಂಬೈ, ಜು. 15: ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 50 ಶೇಕಡದಷ್ಟು ಹೆಚ್ಚಿಸಿದರೆ ಕೇಂದ್ರ ಸರ್ಕಾರದ ಉದ್ದೇಶಿತ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಶರದ್‌ಚಂದ್ರ ಪವಾರ್ ಬಣ)–ಎನ್‌ಸಿಪಿ (ಎಸ್‌ಪಿ) ಬೆಂಬಲ ನೀಡಲಿದೆ ಎಂದು ಪಕ್ಷದ ನಾಯಕಿ ಸುಪ್ರಿಯಾ ಸುಳೆ ಬುಧವಾರ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದೊಂದಿಗೆ ಮೈತ್ರಿ ಏರ್ಪಡಿಸುವ ಬಗ್ಗೆ ಕೆಲವು ಎನ್‌ಸಿಪಿ (ಎಸ್‌ಪಿ) ನಾಯಕರು ಒಲವು ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಸುಪ್ರಿಯಾ ಸುಳೆ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವ ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಬಣ ಮತ್ತು ಎನ್‌ಸಿಪಿ (ಎಸ್‌ಪಿ) ಬಣದ ನಾಯಕರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಈ ಊಹಾಪೋಹಗಳು ತೀವ್ರಗೊಂಡಿವೆ.
ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಬಣವು ಪ್ರತಿಪಕ್ಷ ಮಹಾವಿಕಾಸ ಅಘಾಡಿ ಮೈತ್ರಿಕೂಟದ ಭಾಗವಾಗಿದೆ.
ಏಪ್ರಿಲ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿದ್ದ ಕ್ಷೇತ್ರ ಮರುವಿಂಗಡಣೆ ಮಸೂದೆಯ ವಿರುದ್ಧ ಎನ್‌ಸಿಪಿ (ಎಸ್‌ಪಿ) ಮತ ಹಾಕಿತ್ತು.
ಕೇಂದ್ರ ಸರ್ಕಾರದ ಪ್ರಸ್ತಾಪಿತ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ತನ್ನ ಪಕ್ಷ ಬೆಂಬಲ ನೀಡಬಹುದು ಎಂಬ ಊಹಾಪೋಹಗಳನ್ನು ಎನ್‌ಸಿಪಿ (ಎಸ್‌ಪಿ) ಪಕ್ಷದ ನಾಯಕಿ ಸುಪ್ರಿಯಾ ಸುಳೆ ಬುಧವಾರ ತಳ್ಳಿಹಾಕಿದ್ದಾರೆ. ಪಕ್ಷವು ಮಸೂದೆಯ ಬಗ್ಗೆ ಯಾರೊಂದಿಗೂ ಚರ್ಚಿಸಿಲ್ಲ ಹಾಗೂ ಈ ವಿಷಯದಲ್ಲಿ ಪಕ್ಷವನ್ನು ಯಾರೂ ಸಂಪರ್ಕಿಸಿಲ್ಲ ಎಂದು ಅವರು ಹೇಳಿದರು.
ಮಸೂದೆಯು ಲೋಕಸಭೆಯಲ್ಲಿ ಮಂಡನೆಯಾದ ಬಳಿಕ ಹಾಗೂ ಇಂಡಿಯಾ ಮೈತ್ರಿಕೂಟದೊಂದಿಗೆ ಸಮಾಲೋಚನೆ ನಡೆಸಿದ ನಂತರವಷ್ಟೇ ಎನ್‌ಸಿಪಿ (ಎಸ್‌ಪಿ) ತನ್ನ ನಿಲುವು ಪ್ರಕಟಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಳೆ ಹೇಳಿದರು.
"ಆದರೆ, ಮುಂಬರುವ ಯಾವುದೇ ಮಸೂದೆಯ ಬಗ್ಗೆ ನಾವು ಇಂಡಿಯಾ ಮೈತ್ರಿಕೂಟದೊಳಗೆ ಚರ್ಚೆ ನಡೆಸುತ್ತೇವೆ. ಸ್ಥಾನಗಳ ಸಂಖ್ಯೆಯನ್ನು 50 ಶೇಕಡದಷ್ಟು ಹೆಚ್ಚಿಸಿದರೆ ಅದನ್ನು ನಾವು ಪರಿಗಣಿಸುತ್ತೇವೆ ಎನ್ನುವುದನ್ನು ಡಿಎಂಕೆ, ಎಸ್‌ಪಿ, ಎನ್‌ಸಿಪಿ (ಎಸ್‌ಪಿ) ಮುಂತಾದ ಪಕ್ಷಗಳು ಈಗಾಗಲೇ ಹೇಳಿವೆ" ಎಂದರು.