×
Ad

ಮುಖ್ಯ ಚುನಾವಣಾ ಆಯುಕ್ತ, ಇಸಿಗಳಿಗೆ ಕಾನೂನು ರಕ್ಷಣೆ ವಿರುದ್ಧ ಅರ್ಜಿ: ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

Update: 2026-01-12 16:29 IST

Photo credit: PTI

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರಿಗೆ (ಇಸಿ) ಜೀವಮಾನವಿಡೀ ಕಾನೂನು ಕ್ರಮಗಳಿಂದ ವಿನಾಯಿತಿಯನ್ನು ನೀಡಿ ಸಂಸತ್ತು ತಂದಿರುವ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಹೊರಡಿಸಿದೆ.

ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ ಪೀಠವು,‘ನಾವು ಅದನ್ನು ಪರಿಶೀಲಿಸಲು ಬಯಸುತ್ತೇವೆ,ನಾವು ನೋಟಿಸ್‌ಗಳನ್ನು ಹೊರಡಿಸುತ್ತಿದ್ದೇವೆ’ ಎಂದು ಹೇಳಿತು.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ,ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಮಸೂದೆ,೨೦೨೩ರ ನಿಬಂಧನೆಯೊಂದನ್ನು ಅರ್ಜಿಯು ಪ್ರಶ್ನಿಸಿದೆ.

ಕಾನೂನು ಸಿಇಸಿ ಮತ್ತು ಇಸಿಗಳು ತಮ್ಮ ಅಧಿಕೃತ ಕರ್ತವ್ಯಗಳ ನಿರ್ವಹಣೆ ವೇಳೆ ಕೈಗೊಳ್ಳುವ ಯಾವುದೇ ಕ್ರಮಕ್ಕೆ ಸಂಬಂಧಿಸಿದಂತೆ ಸಿವಿಲ್ ಮತ್ತು ಕ್ರಿಮಿನಲ್ ಕ್ರಮಗಳ ವಿರುದ್ಧ ಜೀವಮಾನವಿಡೀ ಅಭೂತಪೂರ್ವ ರಕ್ಷಣೆಯನ್ನು ಒದಗಿಸಿದೆ ಎಂದು ಅರ್ಜಿಯು ಆರೋಪಿಸಿದೆ.

ಮಸೂದೆಯು ಸಂವಿಧಾನ ನಿರ್ಮಾತೃರು ನ್ಯಾಯಾಧೀಶರಿಗೂ ನೀಡಿರದಷ್ಟು ರಕ್ಷಣೆಯನ್ನು ಸಿಇಸಿ ಮತ್ತು ಇಸಿಗಳಿಗೆ ನೀಡಲು ಸಾಧ್ಯವಿಲ್ಲ. ಸಂವಿಧಾನ ರಚನಾಕಾರರು ಇತರ ಗಣ್ಯರಿಗೆ ನೀಡಿರದ ಇಂತಹ ಹೆಚ್ಚಿನ ರಕ್ಷಣೆಯನ್ನು ಸಂವಿಧಾನವು ಒದಗಿಸುವಂತಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News