×
Ad

ಎಸ್‌ಐಆರ್: ಉತ್ತರ ಬಂಗಾಳದಲ್ಲಿ ಚಹಾತೋಟಗಳ ಕಾರ್ಮಿಕರ ಉದ್ಯೋಗ ದಾಖಲೆಗಳಿಗೆ ಗುರುತಿನ ಚೀಟಿಯಾಗಿ ಮಾನ್ಯತೆ

Update: 2026-01-12 16:52 IST

ಸಾಂದರ್ಭಿಕ ಚಿತ್ರ | Photo Credit ; PTI

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗಾಗಿ (ಎಸ್‌ಐಆರ್) ಉತ್ತರ ಬಂಗಾಳದಲ್ಲಿ ಚಹಾತೋಟಗಳು ಮತ್ತು ಸಿಂಕೋನಾ ನೆಡುತೋಪುಗಳ ಕಾರ್ಮಿಕರ ಅಧಿಕೃತ ಉದ್ಯೋಗ ದಾಖಲೆಗಳನ್ನು ಅವರ ಗುರುತನ್ನು ಸಾಬೀತುಗೊಳಿಸಲು ಮಾನ್ಯ ದಾಖಲೆಯಾಗಿ ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗವು ಹೇಳಿದೆ.

ಇದು ಡಾರ್ಜಿಲಿಂಗ್,ಕಾಲಿಂಪಾಂಗ್, ಜಲಪೈಗುರಿ, ಕೂಚ್‌ಬೆಹಾರ್, ಅಲಿಪುರ್ದುರ್,ಉತ್ತರ ದಿನಾಜ್‌ಪುರ ಮತ್ತು ದಕ್ಷಿಣ ದಿನಾಜ್‌ಪುರ;ಈ ಏಳು ಜಿಲ್ಲೆಗಳಲ್ಲಿನ ಕಾರ್ಮಿಕರಿಗೆ ಅನ್ವಯವಾಗುತ್ತದೆ ಎಂದು ಚು.ಆಯೋಗವು ಪ.ಬಂಗಾಳದ ಮುಖ್ಯ ಚುನಾವಣಾಧಿಕಾರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಈ ಕಾರ್ಮಿಕರ ಪೈಕಿ ಹೆಚ್ಚಿನವರು ಎಸ್‌ಐಆರ್‌ಗಾಗಿ ಚುನಾವಣಾ ಆಯೋಗವು ಕಡ್ಡಾಯಗೊಳಿಸಿರುವ ದಾಖಲೆಗಳನ್ನು ಹೊಂದಿಲ್ಲ. ಜಿಲ್ಲಾ ಚುನಾವಣಾ ಅಧಿಕಾರಿಗಳು ಚಹಾ ಎಸ್ಟೇಟ್‌ಗಳ ಕಾರ್ಮಿಕರ ಪರಿಶೀಲನೆಯನ್ನು ನಡೆಸುತ್ತಾರೆ ಎಂದು ಆಯೋಗವು ಈ ಹಿಂದೆ ಹೇಳಿತ್ತು.

ಬಿಜೆಪಿಯ ನಾಯಕರು ಕಳೆದ ವರ್ಷದ ಅಕ್ಟೋಬರ್‌ನಿಂದಲೇ ಈ ವಿಷಯದಲ್ಲಿ ಚು.ಆಯೋಗಕ್ಕೆ ಅಹವಾಲುಗಳನ್ನು ಸಲ್ಲಿಸುತ್ತಿದ್ದರು.

ಉತ್ತರ ಬಂಗಾಳದಲ್ಲಿಯ ಚಹಾತೋಟಗಳ ಕಾರ್ಮಿಕರು ಮತ್ತು ಅರಣ್ಯವಾಸಿ ಸಮುದಾಯಗಳು ಹಲವಾರು ವರ್ಷಗಳಿಂದಲೂ ಮತದಾರರ ಪಟ್ಟಿಗಳಿಂದ ಹೊರಗುಳಿದಿದ್ದಾರೆ. ಐತಿಹಾಸಿಕವಾಗಿ ಬ್ರಿಟಿಷ್ ಯುಗದಿಂದಲೂ ಮತ್ತು ಸ್ವಾತಂತ್ರ್ಯಾನಂತರದ ದಶಕಗಳಲ್ಲಿಯೂ ಚಹಾ ಮತ್ತು ಸಿಂಕೋನಾ ತೋಟಗಳ ಕಾರ್ಮಿಕರು ತಮ್ಮ ಉದ್ಯೋಗ ದಾಖಲೆಗಳನ್ನು ಹೊರತುಪಡಿಸಿ ಇತರ ಯಾವುದೇ ಅಧಿಕೃತ ದಾಖಲೆಗಳನ್ನು ಹೊಂದಿಲ್ಲ,ಅವರಲ್ಲಿ ಹಲವರು ಭೂ ಹಕ್ಕುಗಳನ್ನೂ ಹೊಂದಿಲ್ಲ ಎಂದು ದಾರ್ಜಿಲಿಂಗ್‌ನ ಬಿಜೆಪಿ ಸಂಸದ ರಾಜು ಬಿಷ್ಟಾ ಅವರು ಚುನಾವಣಾ ಆಯೋಗಕ್ಕೆ ಬರೆದಿದ್ದ ಪತ್ರಗಳಲ್ಲಿ ಎತ್ತಿ ತೋರಿಸಿದ್ದರು.

ಈ ಕಾರ್ಮಿಕರ ಉದ್ಯೋಗ ದಾಖಲೆಗಳನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸುವ ಚುನಾವಣಾ ಆಯೋಗದ ನಿರ್ಧಾರದಿಂದ ಸುದೀರ್ಘ ಕಾಲದಿಂದಲೂ ಮೂಲಭೂತ ದಾಖಲಾತಿ ಮತ್ತು ಮತದಾರರ ಪಟ್ಟಿಗಳಲ್ಲಿ ನೋಂದಣಿ ನಿರಾಕರಿಸಲ್ಪಟ್ಟಿರುವ ಸಾವಿರಾರು ನಾಗರಿಕರಿಗೆ ಪ್ರಯೋಜನವಾಗಲಿದೆ ಎಂದು ಬಿಷ್ಟಾ ಹೇಳಿದರು.

ಪ.ಬಂಗಾಳದ ಕರಡು ಮತದಾರರ ಪಟ್ಟಿಗಳನ್ನು ಡಿ.16ರಂದು ಪ್ರಕಟಿಸಲಾಗಿದ್ದು,ಮೃತಪಟ್ಟಿರುವ,ಸ್ಥಳಾಂತರಗೊಂಡಿರುವ ಅಥವಾ ಗೈರುಹಾಜರಾದ 58 ಲಕ್ಷಕ್ಕೂ ಅಧಿಕ ಮತದಾರರನ್ನು ಕೈಬಿಡಲಾಗಿದೆ.

2026ರ ಪೂರ್ವಾರ್ಧದಲ್ಲಿ ಪ.ಬಂಗಾಳ ವಿಧಾನಸಭಾ ಚುನಾವಣೆಗಳು ನಡೆಯುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News