ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು 3 ಷರತ್ತುಗಳನ್ನು ಮುಂದಿಟ್ಟ ಸೋನಮ್ ವಾಂಗ್ಚುಕ್
Photo: PTI
ಹೊಸದಿಲ್ಲಿ: ಸೋನಮ್ ವಾಂಗ್ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 23ನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಮೂರು ಷರತ್ತುಗಳಲ್ಲಿ ಯಾವುದಾದರೂ ಒಂದನ್ನು ಸರ್ಕಾರ ಒಪ್ಪಿಕೊಂಡರೆ ಸೋಮವಾರ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಾಗಿ ಹಸ್ತಪ್ರತಿಯ ಟಿಪ್ಪಣಿಯಲ್ಲಿ ಅವರು ತಿಳಿಸಿದ್ದಾರೆ.
ಸಫ್ದರ್ಜಂಗ್ ಆಸ್ಪತ್ರೆಯಿಂದ ತಮ್ಮ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರ ಮೂಲಕ ಹಂಚಿಕೊಂಡ ಕೈಬರಹದ ಸಂದೇಶದಲ್ಲಿ ಈ ಷರತ್ತುಗಳನ್ನು ಅವರು ಬರೆದಿದ್ದು, ನನ್ನ ಸಂಚಾರ, ವಾಕ್ ಮತ್ತು ಎಲ್ಲಾ ಸಂವಹನ ಸ್ವಾತಂತ್ರ್ಯವನ್ನು ನಿರ್ಬಂಧಿಸಿರುವ ಸಫ್ದರ್ಜಂಗ್ ಆಸ್ಪತ್ರೆಯ ಅಕ್ರಮ ಬಂಧನದಿಂದ ನಾನು ಇದನ್ನು ಬರೆಯುತ್ತಿದ್ದೇನೆ ಎಂದು ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಮೊದಲ ಷರತ್ತಿನಲ್ಲಿ, ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಇತ್ತೀಚೆಗೆ ಸಂಭವಿಸಿದ ವೈಫಲ್ಯಗಳಿಗೆ ಸರ್ಕಾರವು ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಚರ್ಚೆಗಾಗಿ ಕಾಕ್ರೋಚ್ ಜನತಾ ಪಾರ್ಟಿಯ ಬೇಡಿಕೆಗಳನ್ನು ಕೈಗೆತ್ತಿಕೊಳ್ಳಲು ಸಂಸದರು ಒಪ್ಪಿಕೊಳ್ಳಬೇಕು ಎಂಬುವುದು ಅವರ ಎರಡನೇ ಷರತ್ತಾಗಿದೆ.
ಸಂಸತ್ತಿನತ್ತ ಮೆರವಣಿಗೆ ನಡೆಸಲು ತಮ್ಮ ಆರೋಗ್ಯ ಸಹಕರಿಸದಿದ್ದರೆ, ಸಂಸದರು ಸ್ವತಃ ಸಫ್ದರ್ಜಂಗ್ ಆಸ್ಪತ್ರೆಗೆ ಆಗಮಿಸಿ ಅದೇ ಭರವಸೆಯನ್ನು ನೀಡಬೇಕಾಗುತ್ತದೆ ಎಂದು ಮೂರನೇ ಷರತ್ತಿನಲ್ಲಿ ತಿಳಿಸಿದ್ದಾರೆ.
ರವಿವಾರ ಬಿಡುಗಡೆ ಮಾಡಿದ್ದ ಟಿಪ್ಪಣಿಯ ಮುಂದುವರಿದ ಭಾಗವಾಗಿ ಅವರು ಈ ಹಸ್ತಪ್ರತಿಯ ಟಿಪ್ಪಣಿಯನ್ನು ಬರೆದಿದ್ದಾರೆ. ರವಿವಾರದ ಟಿಪ್ಪಣಿಯಲ್ಲಿ ಅವರು ಸೋಮವಾರದ ಉದ್ದೇಶಿತ ಸಂಸತ್ ಮೆರವಣಿಗೆಯನ್ನು ಭಾರತದ "ಎರಡನೇ ಸ್ವಾತಂತ್ರ್ಯ ಸಂಗ್ರಾಮ" ಎಂದು ಬಣ್ಣಿಸಿದ್ದರು.