ಸೋನಂ ವಾಂಗ್ಚುಕ್ ರನ್ನು ಬಲವಂತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ: ಅಭಿಜಿತ್ ದೀಪ್ಕೆ ಆರೋಪ

ನನ್ನ ಒಪ್ಪಿಗೆ ಇಲ್ಲದೆ ಅವರಿಗೆ ಯಾವುದೇ ಚಿಕಿತ್ಸೆ ನೀಡಬೇಡಿ ಎಂದ ವಾಂಗ್ಚುಕ್ ಪತ್ನಿ

Update: 2026-07-18 10:20 IST

Photo | indiatoday

ಹೊಸದಿಲ್ಲಿ : ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶಿಕ್ಷಣ ತಜ್ಞ, ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ದಿಲ್ಲಿ ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಭಿಜಿತ್ ದೀಪ್ಕೆ, ದಿಲ್ಲಿ ಪೊಲೀಸರು ಜಂತರ್ ಮಂತರ್ ನಲ್ಲಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಜನರನ್ನು ಥಳಿಸಿ, ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ, ನಾನು  ಸೋನಂ ವಾಂಗ್ಚುಕ್ ಅವರನ್ನು ದಾಖಲಿಸಲಾಗಿರುವ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿದ್ದೇನೆ. ಕಳೆದ 20 ದಿನಗಳಿಂದ ಅವರ ಆರೋಗ್ಯದ ಮೇಲೆ ನಿಗಾ ವಹಿಸುತ್ತಿರುವ ವೈದ್ಯರು, ಕುಟುಂಬದ ಸದಸ್ಯರು ಹಾಗೂ ನನ್ನ ನನ್ನ ಪೂರ್ವಾನುಮತಿ ಪಡೆಯದೆ ವಾಂಗ್ಚುಕ್ ಅವರಿಗೆ ಬಾಯಿಯ ಮೂಲಕ ಅಥವಾ ರಕ್ತನಾಳದ ಮೂಲಕ ಯಾವುದೇ ಔಷಧಿ, ದ್ರವ ಅಥವಾ ಚಿಕಿತ್ಸೆ ನೀಡಬಾರದು ಎಂದು ಸಾರ್ವಜನಿಕವಾಗಿ ಆಗ್ರಹಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸುವ ನಿರ್ಧಾರವನ್ನು ಪ್ರಶ್ನಿಸಿದ ಅವರು, ಶುಕ್ರವಾರ ವಾಂಗ್ಚುಕ್ ಅವರು ಚೆನ್ನಾಗಿದ್ದರು ಎಂದು ಹೇಳಿದ್ದಾರೆ.

"ನಿನ್ನೆವರೆಗೂ ಅವರು ಆರೋಗ್ಯವಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವೇ ಇರಲಿಲ್ಲ. ಇದು ಸಂವಿಧಾನದ 32ನೇ ವಿಧಿಯಡಿ ನನಗೆ ಇರುವ ಹಕ್ಕು. ನನ್ನ ಹಾಗೂ ಅವರ ಆರೋಗ್ಯದ ಮೇಲೆ ನಿಗಾ ವಹಿಸುತ್ತಿರುವ ವೈದ್ಯರ ಅನುಮತಿ ಇಲ್ಲದೆ ಅವರಿಗೆ ಯಾವುದೇ ಔಷಧಿ, ದ್ರವ ಅಥವಾ ಚಿಕಿತ್ಸೆ ನೀಡಬಾರದು" ಎಂದು ಅವರು ಹೇಳಿದ್ದಾರೆ.

ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರನ್ನು ಶನಿವಾರ ದಿಲ್ಲಿಯ ಸಫ್ದರ್‌ಜಂಗ್‌ ಆಸ್ಪತ್ರೆಗೆ ಪೊಲೀಸರು ಸ್ಥಳಾಂತರಿಸಿದ್ದಾರೆ. ಇದರ ಬೆನ್ನಲ್ಲೆ ಪ್ರತಿಕ್ರಿಯಿಸಿದ ದಿಲ್ಲಿ ಪೊಲೀಸರು,  ಸೋನಂ ವಾಂಗ್ಚುಕ್ ಅವರ  ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ದಿಲ್ಲಿ ಹೈಕೋರ್ಟ್ ಆದೇಶ ಮತ್ತು ವೈದ್ಯಕೀಯ ತಜ್ಞರ ಸಲಹೆಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News