ಕೇರಳಂ ಕಾಂಗ್ರೆಸ್ ಗೆ ಸುಪ್ರೀಂ ಕೋರ್ಟ್ ನಿಂದ ನ್ಯಾಯಾಂಗ ನಿಂದನೆ ನೋಟಿಸ್
ಸೂರ್ಯ ಕಾಂತ್ , ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ, ನ. 6: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾದ ಸಂದೇಶವೊಂದಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಶುಕ್ರವಾರ ಕೇರಳಂ ಪ್ರದೇಶ ಕಾಂಗ್ರೆಸ್ ಸಮಿತಿ (KPCC)ಯ ಎಲ್ಲ ಪದಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
‘‘ನ್ಯಾಯಾಂಗದ ಸ್ವಾತಂತ್ರ್ಯವು ರಾಜಕೀಯ ಅನುಕೂಲದ ವಿಷಯವಲ್ಲ’’ ಎಂದು ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಸಂವಿಧಾನವೇ ಸರ್ವೋಚ್ಚವಾಗಿದ್ದು, ಯಾವುದೇ ವ್ಯಕ್ತಿ ಅಥವಾ ರಾಜಕೀಯ ಸಂಘಟನೆ ಅದಕ್ಕಿಂತ ಮೇಲಲ್ಲ ಎಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠ ಹೇಳಿತು.
‘‘ತೀರ್ಪುಗಳು ಯಾವಾಗಲೂ ಟೀಕೆಗೆ ಮುಕ್ತವಾಗಿರುತ್ತವೆ. ಆದರೆ, ನ್ಯಾಯಾಂಗದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಅಥವಾ ಬೆದರಿಕೆ ಹಾಕಲು ವಾಕ್ ಸ್ವಾತಂತ್ರ್ಯವನ್ನು ಗುರಾಣಿಯಾಗಿ ಬಳಸಲಾಗದು. ವ್ಯಕ್ತಿಯು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ನ್ಯಾಯಾಲಯದ ಅಧಿಕಾರವನ್ನು ಕುಗ್ಗಿಸುವ ಯಾವುದೇ ಪ್ರಯತ್ನವನ್ನು ಕಬ್ಬಿಣದ ಮುಷ್ಟಿಯಿಂದ ಮಟ್ಟಹಾಕಬೇಕಾಗಿದೆ’’ ಎಂದು ಪೀಠ ಹೇಳಿತು.
‘‘ನ್ಯಾಯಾಲಯದ ಅಧಿಕಾರಕ್ಕೆ ರಾಜಕೀಯ ಅನುಮೋದನೆಯ ಅಗತ್ಯವಿಲ್ಲ. ಅದು ಕಾನೂನಿನ ಆಳ್ವಿಕೆಯ ಮೇಲೆ ನಿಂತಿದೆ. ನ್ಯಾಯ ವ್ಯವಸ್ಥೆಯ ಆಡಳಿತವು ಸ್ಥಾಪಿತವಾಗಿರುವ ಕಡೆ ಕಾನೂನು ತನ್ನದೇ ಹಾದಿಯಲ್ಲಿ ನಡೆಯಬೇಕು’’ ಎಂದು ಪೀಠ ಹೇಳಿತು.
ಈ ಪ್ರಕರಣದಲ್ಲಿ ಕ್ರಿಮಿನಲ್ ಅಥವಾ ಸಿವಿಲ್ ನ್ಯಾಯಾಂಗ ನಿಂದನೆ ನಿಯಮಗಳು ಅನ್ವಯವಾಗುತ್ತವೆಯೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಹಿರಿಯ ವಕೀಲರೊಬ್ಬರನ್ನು ನ್ಯಾಯಾಲಯದ ಸಲಹೆಗಾರರಾಗಿ ನೇಮಿಸಿತು. ಜೊತೆಗೆ, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ನೆರವನ್ನೂ ಕೋರಿತು.
ಕಾಂಗ್ರೆಸ್ ನ ಕೇರಳಂ ಘಟಕದ ಅಧಿಕೃತ 'ಎಕ್ಸ್' ಖಾತೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಟೀಕಿಸಿ ಪ್ರಕಟಿಸಲಾಗಿದ್ದ ಸಂದೇಶವು ಅಕ್ಟೋಬರ್ 12ರಂದು ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾದ ನಂತರ ಅದನ್ನು ಅಳಿಸಲಾಗಿತ್ತು. ಬಳಿಕ, ಈ ಕೃತ್ಯಕ್ಕೆ ಕಾರಣರಾದ ವ್ಯಕ್ತಿಯನ್ನು ಪಕ್ಷದಿಂದ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ತಿಳಿಸಿತ್ತು.