ಸಾಂದರ್ಭಿಕ ಚಿತ್ರ | Photo Credit : magnific

ಹೊಸದಿಲ್ಲಿ, ಅ. 7: ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಧಾರ್ಮಿಕ ಕಿರುಕುಳ ಅಥವಾ ಅದರ ಭೀತಿಯಿಂದ ಭಾರತಕ್ಕೆ ಆಗಮಿಸಿರುವ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳವರು ದೇಶದಲ್ಲಿ ವಾಸ್ತವ್ಯವನ್ನು ಮುಂದುವರಿಸಲು ಸೂಕ್ತ ವೀಸಾ ಹೊಂದಿರಬೇಕೆಂದು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. 2025ರ ವಲಸೆ ಮತ್ತು ವಿದೇಶೀಯರ ವಿನಾಯಿತಿ ಆದೇಶಕ್ಕೆ ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿ ಮಾಡಿದ್ದು, ಸಂಬಂಧಿತ ದಾಖಲೆಗಳ ಅವಧಿ ಮುಗಿಯುವವರೆಗೂ ಈ ನಿಬಂಧನೆಗಳು ಅನ್ವಯವಾಗಲಿವೆ.

2024ರ ಡಿಸೆಂಬರ್ 31ರೊಳಗೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಧಾರ್ಮಿಕ ಕಿರುಕುಳ ಅಥವಾ ಅದರ ಭೀತಿಯಿಂದ ಭಾರತಕ್ಕೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಸಮುದಾಯಗಳ ಜನರಿಗೆ ಈ ನಿಯಮ ಅನ್ವಯವಾಗಲಿದೆ. ಭಾರತದಲ್ಲಿ ವಾಸ್ತವ್ಯ ಮುಂದುವರಿಸಲು ಅವರು ಸೂಕ್ತ ವೀಸಾ ಹೊಂದಿರಬೇಕಾಗುತ್ತದೆ.

ಆದರೆ, ದೀರ್ಘಕಾಲದಿಂದ ಭಾರತದಲ್ಲಿ ನೆಲೆಸಿರುವ ಕಾರಣ ವಿದೇಶಿ ಪಾಸ್ಪೋರ್ಟ್ ನವೀಕರಣ ಸಮಸ್ಯೆಯನ್ನು ಎದುರಿಸುತ್ತಿರುವ ನಿರ್ದಿಷ್ಟ ಪಾಕಿಸ್ತಾನಿ ಪ್ರಜೆಗಳಿಗೆ ಈ ನಿಯಮಗಳಲ್ಲಿ ವಿನಾಯಿತಿ ನೀಡಲಾಗಿದೆ.

ಭಾರತದಲ್ಲಿ ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ 2009ರ ಡಿಸೆಂಬರ್ 31ಕ್ಕಿಂತ ಮೊದಲು ಮಾನ್ಯ ಪಾಸ್ಪೋರ್ಟ್ನೊಂದಿಗೆ ಭಾರತಕ್ಕೆ ಬಂದಿದ್ದ ಹಾಗೂ ಪಾಕಿಸ್ತಾನದ ಗುರುತಿನ ದಾಖಲೆಗಳ ಸಮಸ್ಯೆಯಿಂದ ಪಾಸ್ಪೋರ್ಟ್ ನವೀಕರಿಸಲು ಸಾಧ್ಯವಾಗದ ನಿರ್ದಿಷ್ಟ ವರ್ಗದ ಪಾಕಿಸ್ತಾನಿ ಪ್ರಜೆಗಳಿಗೆ ಈ ವಿನಾಯಿತಿ ಅನ್ವಯಿಸುತ್ತದೆ.

ದೇಶ ವಿಭಜನೆಯ ನಂತರ ಪಾಕಿಸ್ತಾನಕ್ಕೆ ತೆರಳಿದ್ದ, ಮೂಲತಃ ಭಾರತೀಯ ಪ್ರಜೆಯಾಗಿದ್ದ ಮುಸ್ಲಿಂ ಪುರುಷರು ನಿರ್ದಿಷ್ಟ ಷರತ್ತುಗಳಡಿ 2009ರ ಡಿಸೆಂಬರ್ 31ರೊಳಗೆ ಕೇರಳಕ್ಕೆ ಮರಳಿದ್ದರೆ ಅವರಿಗೂ ವಿನಾಯಿತಿ ನೀಡಲಾಗಿದೆ. ಮಲೇಷ್ಯ ಅಥವಾ ಸಿಂಗಾಪುರದ ಪೌರತ್ವ ಪಡೆದಿದ್ದರೂ ತಮ್ಮ ಪಾಸ್ಪೋರ್ಟ್ಗಳನ್ನು ನವೀಕರಿಸಲು ಸಾಧ್ಯವಾಗದ ನಿರ್ದಿಷ್ಟ ಭಾರತೀಯ ಮೂಲದ ವ್ಯಕ್ತಿಗಳಿಗೂ ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿದೆ.

1959ರಿಂದ 2003ರ ಮೇ 30ರ ನಡುವೆ ನೇಪಾಳದಲ್ಲಿನ ಭಾರತೀಯ ರಾಯಭಾರಿ ಕಚೇರಿ ನೀಡಿದ್ದ ಪರ್ಮಿಟ್ಗಳೊಂದಿಗೆ ಭಾರತವನ್ನು ಪ್ರವೇಶಿಸಿದ ಟಿಬೆಟ್ ನಾಗರಿಕರಿಗೆ ಪಾಸ್ಪೋರ್ಟ್ ಹಾಗೂ ವೀಸಾ ವಿನಾಯಿತಿ ನೀಡಲಾಗುವುದು. ಭಾರತ-ನೇಪಾಳ ಗಡಿಯಲ್ಲಿ ನಿಯೋಜಿತ ವಲಸೆ ಠಾಣೆಗಳ ಮೂಲಕ ವಿಶೇಷ ಪ್ರವೇಶಪಾಸ್ಗಳನ್ನು ಹೊಂದಿರುವವರಿಗೂ ಸಂಬಂಧಿತ ವಿನಾಯಿತಿಗಳು ಅನ್ವಯವಾಗಲಿವೆ. ಆದರೆ, ಅವರು ಸ್ಥಳೀಯ ಪ್ರಾಧಿಕಾರಗಳಿಂದ ನೋಂದಣಿ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಇದಲ್ಲದೆ, ಭೂತಾನ್ ಹಾಗೂ ನೇಪಾಳಿ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಲು ಸಾಮಾನ್ಯವಾಗಿ ಪಾಸ್ಪೋರ್ಟ್ ಹೊಂದುವ ಅಗತ್ಯವಿರುವುದಿಲ್ಲ. ಆದರೆ, ಚೀನಾ, ಮಕಾವು, ಹಾಂಕಾಂಗ್ ಅಥವಾ ಪಾಕಿಸ್ತಾನಕ್ಕೆ ಪ್ರಯಾಣಿಸುವ ಅಥವಾ ಅಲ್ಲಿಂದ ಬರುವ ಭೂತಾನ್ ಹಾಗೂ ನೇಪಾಳಿ ಪ್ರಜೆಗಳು ಭಾರತಕ್ಕೆ ಆಗಮಿಸುವಾಗ ಅಥವಾ ನಿರ್ಗಮಿಸುವಾಗ ಪಾಸ್ಪೋರ್ಟ್ ಹಾಗೂ ವೀಸಾಗಳನ್ನು ಹಾಜರುಪಡಿಸಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor