ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಬೇಕು: ಸುಪ್ರೀಂ ಕೋರ್ಟ್ ಖಡಕ್ ಸೂಚನೆ
ಬೀದಿ ನಾಯಿ ಕಡಿತ ಪ್ರಕರಣಗಳ ಕುರಿತು ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ
Photo| indiatoday
ಹೊಸದಿಲ್ಲಿ,ಮೇ 19: ಸಾರ್ವಜನಿಕ ಸ್ಥಳಗಳು, ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು, ಬಸ್ ನಿಲ್ದಾಣಗಳು ಹಾಗೂ ರೈಲು ನಿಲ್ದಾಣಗಳ ಸುತ್ತಮುತ್ತಲಿನಿಂದ ಬೀದಿ ನಾಯಿಗಳನ್ನು ತೆರವುಗೊಳಿಸಬೇಕು ಎಂಬ ತನ್ನ 2025ರ ನವೆಂಬರ್ ಆದೇಶವನ್ನು ಮಾರ್ಪಡು ಮಾಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ‘ಕಠಿಣ ವಾಸ್ತವಗಳಿಗೆ ಕುರುಡಾಗಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿದೆ.
ತನ್ನ ಹಿಂದಿನ ನಿರ್ದೇಶನವನ್ನು ಸಮರ್ಥಿಸಿಕೊಂಡ ಸರ್ವೋಚ್ಚ ನ್ಯಾಯಾಲಯ, ಬೀದಿ ನಾಯಿಗಳ ದಾಳಿ ಗಂಭೀರ ಸಾರ್ವಜನಿಕ ಸುರಕ್ಷತಾ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟಿದೆ. ವಿಶೇಷವಾಗಿ ಮಕ್ಕಳು ಹಾಗೂ ಹಿರಿಯ ನಾಗರಿಕರು ಹೆಚ್ಚು ಬಾಧಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿತು. ಮಕ್ಕಳ ಮೇಲೆ ನಾಯಿ ಕಡಿತದ ಘಟನೆಗಳು ಹೆಚ್ಚುತ್ತಿದ್ದು, ಹಿರಿಯರ ಮೇಲೂ ದಾಳಿಗಳು ನಡೆಯುತ್ತಿವೆ. ದೇಶದ ವಿವಿಧ ಭಾಗಗಳಲ್ಲಿ ವಿದೇಶಿ ಪ್ರವಾಸಿಗರು ಕೂಡ ಬೀದಿ ನಾಯಿಗಳ ಉಪಟಳದಿಂದ ತೊಂದರೆ ಅನುಭವಿಸಿರುವ ಘಟನೆಗಳು ವರದಿಯಾಗಿವೆ ಎಂದು ನ್ಯಾಯಾಲಯ ಉಲ್ಲೇಖಿಸಿತು.
‘ಬಲಿಷ್ಠರು ಮಾತ್ರ ಬದುಕುಳಿಯುತ್ತಾರೆ’ ಎಂಬ ಡಾರ್ವಿನ್ ಸಿದ್ಧಾಂತದಂತೆಯೇ ಪರಿಸ್ಥಿತಿ ರೂಪುಗೊಳ್ಳುತ್ತಿದೆ. ದುರ್ಬಲ ವರ್ಗಗಳನ್ನು ರಕ್ಷಿಸುವಲ್ಲಿ ಆಡಳಿತ ವ್ಯವಸ್ಥೆಯ ಕ್ರಮಗಳು ಸಮರ್ಪಕವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇಂತಹ ಅಪಾಯದ ನಡುವೆ ಮಕ್ಕಳು ಹಾಗೂ ಹಿರಿಯರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಜನರ ಜೀವ ರಕ್ಷಣೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತರಿಪಡಿಸುವುದು ಸರಕಾರದ ಕರ್ತವ್ಯ ಎಂದು ಹೇಳಿದ ನ್ಯಾಯಾಲಯ, ಸಾರ್ವಜನಿಕ ಸ್ಥಳಗಳಲ್ಲಿರುವ ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಬೇಕು ಎಂಬ ತನ್ನ ಹಿಂದಿನ ಆದೇಶವನ್ನು ಬದಲಿಸಲು ನಿರಾಕರಿಸಿತು.