ಮೇವು ಹಗರಣ: ಲಾಲೂ ಪ್ರಸಾದ್ ಶಿಕ್ಷೆ ರದ್ದುಗೊಳಿಸಿದ್ದ ಜಾರ್ಖಂಡ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್
ಲಾಲೂ ಪ್ರಸಾದ್ ಯಾದವ್ (Photo: PTI)
ಹೊಸದಿಲ್ಲಿ: ದೇವಘರ್ ಮೇವು ಹಗರಣ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ ನಾಯಕ ಲಾಲು ಪ್ರಸಾದ್ ಯಾದವ್ ಅವರ ಶಿಕ್ಷೆಯನ್ನು ರದ್ದುಗೊಳಿಸಿದ್ದ ಜಾರ್ಖಂಡ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಶಿಕ್ಷೆ ರದ್ದುಗೊಳಿಸಿದ್ದ ಜಾರ್ಖಂಡ್ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಆರು ತಿಂಗಳೊಳಗೆ ಲಾಲು ಪ್ರಸಾದ್ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಮೇಲ್ಮನವಿಯನ್ನು ಇತ್ಯರ್ಥಪಡಿಸುವಂತೆ ಹೈಕೋರ್ಟ್ ಗೆ ಸೂಚಿಸಿದೆ.
ಐಪಿಸಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಲಾಲು ಪ್ರಸಾದ್ ಅವರನ್ನು ದೋಷಿ ಎಂದು ಘೋಷಿಸಿ, ಮೂರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ತಾನು ಈಗಾಗಲೇ ಅರ್ಧಕ್ಕಿಂತ ಹೆಚ್ಚು ಶಿಕ್ಷೆಯ ಅವಧಿಯನ್ನು ಪೂರೈಸಿರುವುದಾಗಿ ತಿಳಿಸಿರುವ ಲಾಲು ಪ್ರಸಾದ್ ಅವರ ಮೂರನೇ ಅರ್ಜಿಯನ್ನು ಪುರಸ್ಕರಿಸಿ, ಹೈಕೋರ್ಟ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿತ್ತು.
ಈ ಪ್ರಕರಣದಲ್ಲಿ ಲಾಲು ಪ್ರಸಾದ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ್ದ ಜಾರ್ಖಂಡ್ ಹೈಕೋರ್ಟ್ ನ 2019 ರ ಜುಲೈ 12 ರ ಆದೇಶವನ್ನು ಪ್ರಶ್ನಿಸಿ ಜಾರ್ಖಂಡ್ ಸರ್ಕಾರ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಲೆ ಅವರನ್ನೊಳಗೊಂಡ ಪೀಠವು ನಡೆಸುತ್ತಿತ್ತು ಎಂದು ನ್ಯಾಯಾಂಗ ಸುದ್ದಿ ಜಾಲತಾಣ livelaw.in ವರದಿ ಮಾಡಿದೆ.