ಸುವೇಂದು ಅಧಿಕಾರಿ ಆಪ್ತ ಸಹಾಯಕನ ಕೊಲೆ ಪ್ರಕರಣ : ತಪ್ಪು ಗ್ರಹಿಕೆಯಿಂದ ಬಂಧಿಸಲ್ಪಟ್ಟ ವ್ಯಕ್ತಿಯನ್ನು ಬಿಡುಗಡೆಗೊಳಿಸಿದ ಸಿಬಿಐ
ರಾಜ್‌ಕುಮಾರ್ ಸಿಂಗ್ | Photo Credit : NDTV
ಲಕ್ನೋ,ಮೇ 21: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಆಧಿಕಾರಿಯವರ ಆಪ್ತ ಸಹಾಯಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ರಾಜ್‌ಸಿಂಗ್‌ನನ್ನು ಕೇಂದ್ರೀಯ ತನಿಖಾ ಸಂಸ್ಥೆ ಕ್ಲೀನ್‌ಚಿಟ್ ನೀಡಿ ಬಿಡುಗಡೆಗೊಳಿಸಿದೆ. ಈ ಕೊಲೆ ಪ್ರಕರಣದ ಮುಖ್ಯ ಶೂಟರ್ ಆಗಿದ್ದ ರಾಜ್‌ಕುಮಾರ್ ಸಿಂಗ್ ಎಂದು ತಪ್ಪಾಗಿ ಗ್ರಹಿಸಿ ಉತ್ತರಪ್ರದೇಶದ ಬಾಲಿಯಾ ಜಿಲ್ಲೆಯ ನಿವಾಸಿ ರಾಜ್‌ಸಿಂಗ್‌ನನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದರೆಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಆನಂತರ ಶೂಟರ್ ರಾಜಕುಮಾರ್ ಸಿಂಗ್‌ನನ್ನು ಮೇ 19ರಂದು ಮುಝಾಫರ್ ನರದ ಛಾಪರ್ ಟೋಲ್ ಪ್ಲಾಝಾ ಬಳಿ ಪೊಲೀಸರು ಬಂಧಿಸಿದ್ದರು.
ರಾಜ್‌ಸಿಂಗ್ ಬಂಧಿತನಾದಾಗ ಆತ ಕುಟುಂಬಿಕರು ಹಾಗೂ ಸ್ನೇಹಿತರೊಂದಿಗೆ ಲಕ್ನೋದಲ್ಲಿ ಶಾಸಕರೊಬ್ಬರ ವಿವಾಹದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದಾಗ ಉತ್ತರ ಪ್ರದೇಶ ಪೊಲೀಸರು ಆಯೋಧ್ಯೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು ಮತ್ತು ಪಶ್ಚಿಮಬಂಗಾಳ ಪೊಲೀಸರಿಗೆ ಹಸ್ತಾಂತರಿಸಿದ್ದರು.
ಬಂಧನವಾದ ಕೂಡಲೇ ರಾಜ್‌ಸಿಂಗ್ ಬಿಜೆಪಿ ನಾಯಕರ ಜೊತೆಗಿರುವ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಅದಕ್ಕೂ ಮುನ್ನ ಕೋಲ್ಕತಾ ಪೊಲೀಸರು ಈ ಪ್ರಕರಣದ ಇತರ ಆರೋಪಿಗಳಾದ ವಿಕಿ ಮೌರ್ಯ ಹಾಗೂ ಮಾಯಾಂಕ್ ಮಿಶ್ರಾ ಅವರನ್ನು ಬಿಹಾರದ ಬಕ್ಸಾರ್‌ನಲ್ಲಿ ಬಂಧಿಸಿದ್ದರು. ಇವರಿಬ್ಬರ ಬಂಧನವು ಪ್ರಕರಣದ ತನಿಖೆಗೆ ಸುಳಿವನ್ನು ಒದಗಿಸಲು ದಾರಿ ಮಾಡಿಕೊಟ್ಟಿತ್ತು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶ ಎಸ್‌ಟಿಎಫ್‌ನ ನೆರವಿನೊಂದಿಗೆ ಶಸ್ತ್ರಾಸ್ತ್ರ ಕಳ್ಳಸಾಗಣೆದಾರ ನವೀನ್ ಕುಮಾರ್‌ಸಿಂಗ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೂ ಒಂದು ದಿನ ಮುನ್ನ ಸಿಬಿಐ ಇನ್ನೋರ್ವ ಆರೋಪಿ ಗಾಝಿಪುರದ ದಿಯೋರಿಯಾ ಗ್ರಾಮದ ನಿವಾಸಿ ವಿನಯ್ ರಾಯ್‌ನನ್ನು ವಾರಣಾಸಿಯಿಂದ ಬಂಧಿಸಿದೆ.
ಸುವೇಂದು ಅವರ ಆಪ್ತಸಹಾಯಕ ಚಂದ್ರನಾಥ ರಥ್ ಅವರನ್ನು ಮೇ 6ರಂದು ಆರೋಪಿಗಳು ಪಶ್ಚಿಮಬಂಗಾಳದ 24 ಉತ್ತರ ಪರಗಣ ಜಿಲ್ಲೆಯಲ್ಲಿ ಗುಂಡು ಹಾರಿಸಿ ಹತ್ಯೆಗೈದಿದ್ದರು.