ಸ್ವತಂತ್ರ ಭಾರದ್ವಾಜ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಹೊಸ FIR ದಾಖಲು
ಉತ್ತರ ಪ್ರದೇಶ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಸ್ವಯಂಘೋಷಿತ ಗೋರಕ್ಷಕ
Photo |timesofindia
ಬುಲಂದ್ಶಹರ್: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿ ನಿಶು ಆಝಾದ್ ಅವರ ತಂದೆ ಸಂಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೀಗ ಮತ್ತೊಂದು ಬೆಳವಣಿಗೆ ನಡೆದಿದ್ದು, ಭಾರದ್ವಾಜ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಹೊಸ ಎಫ್ಐಆರ್ ದಾಖಲಿಸಲಾಗಿದೆ. ಈ ಹಿಂದೆ ದಾಖಲಿಸಲಾಗಿದ್ದ ಎಫ್ಐಆರ್‌ಗೆ ಎಸ್‌ಸಿ, ಎಸ್ಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳನ್ನೂ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಭಾರದ್ವಾಜ್ ಭಾಗವಹಿಸಿದ್ದ ಪಾಡ್ ಕಾಸ್ಟ್ ನ ವೀಡಿಯೋ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ಸಂಜಯ್ ಕುಮಾರ್ ಅವರ ‘ತಲೆಬುರುಡೆಯನ್ನು ಒಡೆದಿದ್ದೇನೆ’ ಎಂದು ಭಾರದ್ವಾಜ್ ಹೇಳಿಕೊಂಡಿರುವುದು ಕಂಡುಬಂದಿತ್ತು. ಹಲ್ಲೆ ಪ್ರಕರಣದ ಹೊರತಾಗಿಯೂ ತಾನು ಜೈಲಿಗೆ ಹೋಗಿಲ್ಲ ಎಂಬುದನ್ನೂ ಆತ ಹೇಳಿಕೊಂಡಿದ್ದನು. ‘ರಾಜಕೀಯ ನಾಯಕರ ಜೊತೆಗಿನ ತನ್ನ ಸಂಪರ್ಕದಿಂದ ಜೈಲಿನಿಂದ ಹೊರಗಿದ್ದೇನೆ ಎಂದು ಆತ ಹೇಳಿಕೊಂಡಿದ್ದನು.
ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಭಾರದ್ವಾಜ್
ಸ್ಥಳೀಯ ನಿವಾಸಿಗಳ ಪ್ರಕಾರ, ಭಾರದ್ವಾಜ್ ಶುಕ್ರವಾರ ಮುಂಜಾನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ಗೆ ಆಗಮಿಸಿದ್ದ. ಬಂಧನದಿಂದ ತಪ್ಪಿಸಿಕೊಳ್ಳಲು ನೈತ್ಲಾ ಗ್ರಾಮದ ಸ್ಥಳೀಯ ಮನೆಯಲ್ಲಿ ಆಶ್ರಯ ಪಡೆದಿದ್ದ ಎಂದು ತಿಳಿದು ಬಂದಿದೆ.
ಭಾರದ್ವಾಜ್, ದಿಲ್ಲಿ-ಎನ್‌ಸಿಆರ್ ಪ್ರದೇಶದಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿರುವ ನೈತ್ಲಾ ನಿವಾಸಿ ಹರಿಶಂಕರ್ ಶರ್ಮಾ ಮನೆಯಲ್ಲಿ ತಂಗಿದ್ದ. ಈ ಹಿಂದೆ ಪ್ರಯಾಣವೊಂದರ ವೇಳೆ ಭಾರದ್ವಾಜ್ ನನ್ನು ಪರಿಚಯವಾಗಿದ್ದಾಗಿ ಶರ್ಮಾ ಹೇಳಿದ್ದಾರೆ.
"ಭಾರದ್ವಾಜ್ ನನಗೆ ಕರೆ ಮಾಡಿ, ನನ್ನನ್ನು ಭೇಟಿಯಾಗಲು ನನ್ನ ಮನೆಗೆ ಬರುತ್ತಿರುವುದಾಗಿ ಹೇಳಿದ. ಅವನು ಮತ್ತೊಬ್ಬ ವ್ಯಕ್ತಿಯೊಂದಿಗೆ ಮನೆಗೆ ಬಂದ. ಆರಂಭದಲ್ಲಿ ನನಗೆ ಯಾವುದೇ ಅನುಮಾನ ಬರಲಿಲ್ಲ. ಆದರೆ ನನ್ನ ಗ್ರಾಮಕ್ಕೆ ಮಾಧ್ಯಮದವರು ಬರಲು ಆರಂಭಿಸಿದಾಗ, ಸಂಶಯ ಮೂಡಿತ್ತು. ಭಾರದ್ವಾಜ್ ಬಳಿಕ ತನ್ನ ಬೈಕ್ ಅನ್ನು ಬಳಸಬಹುದೆ ಎಂದು ಕೇಳಿದ. ಐದು ನಿಮಿಷಗಳೊಳಗೆ ವಾಪಸ್ ಬರುತ್ತೇನೆ ಎಂದು ಹೇಳಿ ಹೋಗಿದ್ದ. ಬಳಿಕ ದಿಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂಬುದು ನನಗೆ ತಿಳಿಯಿತು. ರಾಷ್ಟ್ರ ರಾಜಧಾನಿಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವೊಂದರಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದ ಎಂಬುದು ಆ ನಂತರ ನನಗೆ ತಿಳಿಯಿತು, ಈ ಪ್ರಕರಣದ ಬಗ್ಗೆ ನನಗೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲ” ಎಂದು ಶರ್ಮಾ ಹೇಳಿದರು.
ಮತ್ತೊಬ್ಬ ಸ್ಥಳೀಯ ನಿವಾಸಿ ಶಮ್ಶುದ್ದೀನ್ ಸೈಫಿ ಅವರ ಪ್ರಕಾರ, “ಸಾದಾ ಉಡುಪಿನಲ್ಲಿದ್ದ ಮೂವರು ವ್ಯಕ್ತಿಗಳು ಇದ್ದ ಕಾರೊಂದನ್ನು ಕಂಡ ಬಳಿಕ ಕೆಲವು ಗ್ರಾಮಸ್ಥರಿಗೆ ಅನುಮಾನ ಮೂಡಿತ್ತು. ನಾವು ಕಾರಿನಲ್ಲಿದ್ದವರನ್ನು ಪ್ರಶ್ನಿಸಿದಾಗ, ತಾವು ಪೊಲೀಸರು ಎಂದು ಹೇಳಿದ್ದಾರೆ. ಬಳಿಕ ಬುಲಂದ್‌ಶಹರ್‌ನ ಧಮೇಡಾ ನಾರಾ ಗ್ರಾಮದಿಂದ ಭಾರದ್ವಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬುದು ನಮಗೆ ತಿಳಿಯಿತು" ಎಂದು ಹೇಳಿದ್ದಾರೆ.
"ವಾಟ್ಸ್‌ಆ್ಯಪ್‌ನ ಮೂಲಕ ಭಾರದ್ವಾಜ್ ಅಲ್ಲಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಯಿತು. ನಾವು ತಕ್ಷಣವೇ ಸ್ಥಳಕ್ಕೆ ಸ್ಥಳೀಯ ಪೊಲೀಸ್ ತಂಡವನ್ನು ಕಳುಹಿಸಿದ್ದೆವು. ಆದರೆ ತಂಡ ಅಲ್ಲಿಗೆ ತಲುಪುವಷ್ಟರಲ್ಲಿ ಆತ ಸ್ಥಳದಿಂದ ತೆರಳಿದ್ದ" ಎಂದು ಪೊಲೀಸ್ ಅಧಿಕಾರಿ ದೀಪಕ್ ಕುಮಾರ್ ಹೇಳಿದ್ದಾರೆ.
ಸಿಜೆಪಿ ಪ್ರತಿನಿಧಿಗಳ ಪ್ರಕಾರ, ದಿಲ್ಲಿ ಪೊಲೀಸರು ಭಾರದ್ವಾಜ್ ನನ್ನು 72 ಗಂಟೆಗಳ ಒಳಗೆ ಬಂಧಿಸುವುದಾಗಿ ಭರವಸೆ ನೀಡಿದ್ದರು.
ತಂದೆಯ ಮೇಲಿನ ಹಲ್ಲೆಯ ಕುರಿತು ದೂರು ನೀಡಿ ಎಫ್ಐಆರ್ ದಾಖಲಿಸಿದ ಬಳಿಕ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಮತ್ತು ನನಗೆ ಅತ್ಯಾಚಾರದ ಬೆದರಿಕೆಗಳು ಬಂದಿದ್ದವು ಎಂದು ನಿಶು ಆಝಾದ್ ಆರೋಪಿಸಿದ್ದಾರೆ.
ʼಹೊರಗೆ ಕಾಲಿಡುವುದಕ್ಕೂ ಕಷ್ಟವಾಗುತ್ತಿತ್ತು. ಕೆಲವು ವಾರಗಳ ಕಾಲ ನಾನು ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸುತ್ತೇನೆʼ ಎಂದು ನಿಶು ಆಝಾದ್ ಹೇಳಿದ್ದಾರೆ.